https://youtube.com/shorts/AWyQA9JMFI4?si=6teca9JBs0VZQurx
newsics.com
ಇಂಡಿ : ಅಪರೂಪದ ವಿದೇಶಿ ತಳಿ, ಬೆಲೆಬಾಳುವ ‘ಮಿಯಾಝಕಿ’ ಮಾವಿನ ಹಣ್ಣು ಬೆಳೆದು ಇಂಡಿ ನಗರದ ರೈತ ಮಹಿಳೆ ಕಮಾಲ್ ಮಾಡಿದ್ದಾರೆ. ಸದ್ಯ ಲಕ್ಷ ರೂ.ಗೆ ಕೆಜಿಯಂತೆ ಮಾರಾಟವಾಗುತ್ತಿದ್ದು, ಭರಪೂರ ಆದಾಯ ಗಳಿಸುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ನಗರದ ಪ್ರಗತಿಪರ ರೈತ ಮಹಿಳೆ ರಾಜಶ್ರೀ ಅನಂತ ಜೈನ ಅವರು ವಿಶ್ವದ ಅತ್ಯಂತ ದುಬಾರಿ ತಳಿ ಎಂದೇ ಖ್ಯಾತಿಯಾದ ಜಪಾನ್ ಮೂಲದ ‘ಮಿಯಾಝಕಿ’ ಮಾವನ್ನು ಬೆಳೆಯುವ ಮೂಲಕ ಗಮನಸೆಳೆದಿದ್ದಾರೆ. ಕೇವಲ 10 ಗುಂಟೆ ಜಮೀನಿನಲ್ಲಿ ಆಂಧ್ರಪ್ರದೇಶದಿಂದ ತಂದ ಸಸಿಗಳನ್ನು ನಾಟಿ ಮಾಡಿರುವ ಇವರು, ಈಗ ಯಶಸ್ವಿಯಾಗಿ ಫಸಲು ಪಡೆಯುತ್ತಿದ್ದಾರೆ.
20 ವರ್ಷಗಳ ಹಿಂದೆ ಖರೀದಿಸಿದ್ದ 10 ಎಕರೆ ಬಂಜರು ಜಮೀನಿನಲ್ಲಿ ರಾಜಶ್ರೀ ಅವರು ಪತಿಯ ಸಹಕಾರದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ದೇಶ-ವಿದೇಶದ 40 ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡ ಬೆಳೆಸಿದ್ದು, ಬಹುತೇಕ ಫಲ ನೀಡುತ್ತಿವೆ. ಮಿಯಾಝಕಿ, ಬನಾನಾ ಮಾವಿನಹಣ್ಣು, ವಾಟರ್ ಆ್ಯಪಲ್ ಸೇರಿ ಪ್ರತಿಯೊಂದು 25 ಕ್ಕೂ ಹೆಚ್ಚು ಹಣ್ಣಿನ ಗಿಡ ಬೆಳೆದಿದ್ದಾರೆ.
ಸಂಪೂರ್ಣ ನೀರಾವರಿ ಅಳವಡಿಸಿಕೊಂಡಿದ್ದು, ಐದು ಕೊಳವೆಬಾವಿ ಕೊರೆಸಿದ್ದಾರೆ. ಎಲ್ಲ ಕಡೆಗೂ ಸೆಟಲೈಟ್ ಮೊಬೈಲ್ ಆಪರೇಟರ್‌ನಿಂದ ನೀರು ಬಿಡುವ ವ್ಯವಸ್ಥೆ ಇದೆ. ಮೊದಲು ತರಕಾರಿ ಬೆಳೆದ ರಾಜಶ್ರೀ ಅವರು, ಹೊಲದ ಬದುವಿಗೆ ಸ್ವದೇಶಿ ಹಾಗೂ ವಿದೇಶಿ ತಳಿಯ ಹಣ್ಣಿನ ಗಿಡ, 20 ತೆಂಗಿನ ಗಿಡ ಬೆಳೆಸಿದರು. ಈಗ ವಿದೇಶಿ ಮಾವಿನ ಹಣ್ಣು ಬೆಳೆದು ಯಶಸ್ಸು ಸಾಧಿಸಿದ್ದಾರೆ.
ಮಿಯಾಝಕಿ ಮಾವು ನಾಲ್ಕು ವರ್ಷಕ್ಕೆ ಫಸಲು ಕೊಡಲು ಆರಂಭಿಸುತ್ತದೆ. ರಾಜಶ್ರೀ ಅವರು ಎರಡು ವರ್ಷದ ಅಗಿ ತಂದು ಹಚ್ಚಿದ್ದರು. ಈಗ ಎರಡು ವರ್ಷದ ಬಳಿಕ ಫಸಲು ನೀಡುತ್ತಿವೆ.