https://www.newsics.com/2026/03/19/happy-ugadi-may-the-year-of-ugadi-be-prosperous/
newsics.com
ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆಯೇ ಮಾತುಗಳು ಚರ್ಚೆ. ಯುಎಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ಬಳಿಕ ಅನಿಲ-ತೈಲ ಸಾಗಣೆಯಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಸದ್ಯ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುತ್ತಿದ್ದರೂ, ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದರಿಂದಾಗಿ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ಸರಿಯಾಗಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಇದೆಲ್ಲದರ ಮಧ್ಯೆ ಎಲ್‌ಪಿಜಿ ATMವೊಂದು ಉದ್ಘಾಟನೆಯಾಗಿದೆ. ಹೇಗೆ ನೀವು ATM ಮಷಿನ್‌ನಲ್ಲಿ ಕ್ವಿಕ್ ಆಗಿ ಹಣ ಪಡೆಯುತ್ತಿರೋ, ಹಾಗೇ, ಈ ಎಟಿಎಂನಲ್ಲಿ ನಿಮಿಷದೊಳಗೆ ಎಲ್‌ಪಿಜಿ ಸಿಲಿಂಡರ್ ಪಡೆಯಬಹುದು..!
ಹಣದ ಎಟಿಎಂ ಮಾದರಿಯಲ್ಲೇ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ ಮಿಷನ್ ಮೂಲಕ ಬಳಕೆದಾರರು ಕೇವಲ 2 ನಿಮಿಷಗಳಲ್ಲಿ ಭರ್ತಿಯಾದ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ. ದಿನದ 24 ಗಂಟೆಯೂ ಲಭ್ಯವಿರುವ ಈ ಸೇವೆಯು ಡೆಲಿವರಿ ಬಾಯ್‌ಗಳಿಗಾಗಿ ಕಾಯುವ ಕಿರಿಕಿರಿಗೆ ಮುಕ್ತಿ ನೀಡಲಿದ್ದು, ಪಾರದರ್ಶಕ ಮತ್ತು ಸುರಕ್ಷಿತ ಕಂಪೋಸಿಟ್ ಸಿಲಿಂಡರ್‌ಗಳ ಮೂಲಕ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.
ಹಣ ಡ್ರಾ ಮಾಡುವ ರೀತಿಯಲ್ಲೇ, ಈಗ ನಿಮ್ಮ ಮನೆಯ ಹತ್ತಿರದ ಎಟಿಎಂನಿಂದ ಕೇವಲ 2 ನಿಮಿಷಗಳಲ್ಲಿ ಭರ್ತಿಯಾದ ಗ್ಯಾಸ್ ಸಿಲಿಂಡರ್ ಪಡೆಯಬಹುದು! ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ದೇಶದಲ್ಲೇ ಮೊದಲ ಬಾರಿಗೆ ಇಂತಹ ವಿಶಿಷ್ಟ ‘ಎಲ್‌ಪಿಜಿ ಗ್ಯಾಸ್ ಎಟಿಎಂ’ ಅನ್ನು ಪರಿಚಯಿಸಿದೆ.
ಎಲ್ಲಿ ಆರಂಭವಾಗಿದೆ ಈ ಸೇವೆ?
ಪ್ರಾಯೋಗಿಕವಾಗಿ (Pilot Project) ಹರಿಯಾಣದ ಗುರುಗ್ರಾಮದ ಸೋಹ್ರಾ ಪ್ರದೇಶದ ಸೆಕ್ಟರ್ 22ರಲ್ಲಿ ಈ ಸ್ಮಾರ್ಟ್ ಎಟಿಎಂ ಮಿಷನ್ ಅನ್ನು ಸ್ಥಾಪಿಸಲಾಗಿದೆ. ಇದು ಸಂಪೂರ್ಣವಾಗಿ ಆಟೋಮೇಟೆಡ್ ಆಗಿ ಕಾರ್ಯನಿರ್ವಹಿಸುತ್ತದೆ.
ಸಿಲಿಂಡರ್ ಪಡೆಯುವ ವಿಧಾನ ತುಂಬಾ ಸುಲಭ:
ಲಾಗಿನ್: ಮೊದಲು ಎಟಿಎಂ ಮಿಷನ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಬೇಕು.
OTP ದೃಢೀಕರಣ: ನಿಮ್ಮ ಫೋನ್‌ಗೆ ಬರುವ ಓಟಿಪಿ (OTP) ಅನ್ನು ನಮೂದಿಸಿ ದೃಢೀಕರಿಸಬೇಕು.
ಪಾವತಿ: ಸ್ಕ್ರೀನ್ ಮೇಲೆ ಕಾಣಿಸುವ QR ಕೋಡ್ ಸ್ಕ್ಯಾನ್ ಮಾಡಿ ಯುಪಿಐ (UPI) ಮೂಲಕ ಹಣ ಪಾವತಿಸಬಹುದು.
ವಿನಿಮಯ: ಪಾವತಿ ಪೂರ್ಣಗೊಂಡ 2-3 ನಿಮಿಷಗಳಲ್ಲಿ ಮಿಷನ್‌ನಿಂದ ಭರ್ತಿಯಾದ ಹೊಸ ಸಿಲಿಂಡರ್ ಹೊರಬರುತ್ತದೆ. ಅದೇ ಸಮಯದಲ್ಲಿ ನಿಮ್ಮಲ್ಲಿರುವ ಖಾಲಿ ಸಿಲಿಂಡರ್ ಅನ್ನು ಮಿಷನ್ ಒಳಗೆ ಇರಿಸಬೇಕು.
ಈ ಮಷಿನ್ ವಿತರಿಸುವುದು ಭಾರವಾದ ಸಿಲಿಂಡರ್‌ಗಳನ್ನಲ್ಲ. ಹಗುರ ಮತ್ತು ಸುರಕ್ಷಿತವಾದ ಸಿಲಿಂಡರ್‌ಗಳನ್ನ. ಇವು ಸಂಯೋಜಿತ ನಾರಿನಿಂದ ಮಾಡಲ್ಪಟ್ಟಿದ್ದು, ಹಗುರವಾಗಿರುತ್ತವೆ. ಸಾಂಪ್ರದಾಯಿಕ ಸಿಲಿಂಡರ್ ಸುಮಾರು 31 ಕೆಜಿ ತೂಗುತ್ತದೆ, ಆದರೆ ಇವು ಸುಮಾರು 15 ಕೆಜಿ ತೂಗುತ್ತವೆ. ಇವು ತುಕ್ಕು ರಹಿತ, ಸ್ವಚ್ಛ ಮತ್ತು ಹೆಚ್ಚು ನೈರ್ಮಲ್ಯಯುತವಾಗಿವೆ. ಪಾರದರ್ಶಕ ವಿನ್ಯಾಸವು ಬಳಕೆದಾರರಿಗೆ ಅನಿಲ ಮಟ್ಟವನ್ನು ಸುಲಭವಾಗಿ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.
https://www.newsics.com/2026/03/20/do-you-know-why-it-is-good-to-eat-3-hours-before-going-to-bed/