https://www.newsics.com/2026/03/19/happy-ugadi-may-the-year-of-ugadi-be-prosperous/
newsics.com
ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 19 ರಂದು ಹೈದರಾಬಾದ್ ಹೈಟೆಕ್ಸ್ನಲ್ಲಿ ಯುಗಾದಿಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯಿತು. 2025 ರ ವರ್ಷದ ಗದ್ದರ್ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಮತ್ತು ರಾಮ್ ಚರಣ್ ಅವರು ಜಂಟಿಯಾಗಿ ರಶ್ಮಿಕಾ ಅವರಿಗೆ ಗದರ್ ಅವಾರ್ಡ್ ಅನ್ನು ನೀಡಿದರು. ಪ್ರಶಸ್ತಿ ಸ್ವೀಕರಿಸುವ ವೇಳೆ ಖುದ್ದು ಸಿಎಂ ರೇವಂತ್ ರೆಡ್ಡಿ ಅವರು ರಶ್ಮಿಕಾರನ್ನು ತಮ್ಮ ಊರಿನ ಸೊಸೆ ಎಂದರು. ಇದು ರಶ್ಮಿಕಾಗೆ ಸಖತ್ ಖುಷಿ ಕೊಟ್ಟಿತು. ಬಳಿಕ ಮಾತನಾಡಿದ ರಶ್ಮಿಕಾ ಮಂದಣ್ಣ, ‘ಒಂದು ಸಮಯದಲ್ಲಿ ನನ್ನ ನಟನೆಯನ್ನು ಟ್ರೋಲ್ ಮಾಡಿದ್ದರು ಆದರೆ ಈಗ ಸರ್ಕಾರವೊಂದು ನನ್ನ ನಟನೆ ಮೆಚ್ಚಿ ಪ್ರಶಸ್ತಿ ನೀಡಿದೆ’ ಎಂದರು.
ಮುಂದುವರೆದು ಮಾತನಾಡಿ, ‘ಗರ್ಲ್ಫ್ರೆಂಡ್’ ಸಿನಿಮಾಕ್ಕೆ ಈ ಪ್ರಶಸ್ತಿ ಸಿಕ್ಕಿರುವುದು ಹೆಚ್ಚು ಖುಷಿ ಕೊಟ್ಟಿದೆ. ‘ಗರ್ಲ್ಫ್ರೆಂಡ್’ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷ ಸಿನಿಮಾ. ಈ ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದು ಇಂಥಹಾ ಇನ್ನೂ ಹಲವು ಸಿನಿಮಾಗಳನ್ನು ಮಾಡಲು, ಪ್ರಯೋಗಗಳನ್ನು ಮಾಡಲು ಸ್ಪೂರ್ತಿ ನೀಡಿದೆ.
ಬಳಿಕ ತುಸು ಭಾವುಕರಾದ ನಟಿ ರಶ್ಮಿಕಾ, ‘ನಾನು ಕೆಲವು ವರ್ಷಗಳ ಹಿಂದೆ ಮಗಳಾಗಿ ಬಂದಿದ್ದೆ, ಈಗ ಸೊಸೆಯಾಗಿ ಎದುರಿಗೆ ನಿಂತಿದ್ದೀನಿ, ಆ ಬಗ್ಗೆ ನನಗೆ ಹೆಮ್ಮೆಯಿದೆ, ನನ್ನನ್ನು ಸ್ವೀಕರಿಸಿದ್ದಕ್ಕೆ ಬಹಳ ಧನ್ಯವಾದಗಳು. ನನಗೆ ಈಗ ಇರುವ ಆಸೆಯೆಂದರೆ ನನ್ನ ಕುಟುಂಬಕ್ಕೆ ಇದೇ ಪ್ರೀತಿ ಕೊಡಿ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದರು ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರು ಪ್ರಶಸ್ತಿ ಸ್ವೀಕರಿಸುವಾಗ ಅವರ ಅತ್ತೆ ಸಮಾರಂಭದಲ್ಲಿ ಹಾಜರಿದ್ದರು.