https://www.newsics.com/2026/03/19/happy-ugadi-may-the-year-of-ugadi-be-prosperous/
newsics.com
ಬದಲಾಗಿರುವ ಜೀವನ ಶೈಲಿಯಿಂದಾಗಿ ರಾತ್ರಿ ತಡವಾಗಿ ಊಟ ಮಾಡುವುದು ಇತ್ತೀಚಿನ ಕಾಲಘಟ್ಟದವರಿಗೆ ಅಭ್ಯಾಸವಾಗಿಬಿಟ್ಟಿದೆ. ಹಿರಿಯರು ತಮ್ಮದೇ ಕೆಲಸದಲ್ಲಿ ತಲ್ಲೀನರಾದ್ರೆ, ಮಕ್ಕಳು ಟಿವಿ ನೋಡುವುದರಲ್ಲಿ ಬ್ಯುಸಿ. ಊಟದ ಸೂಕ್ತ ಸಮಯವನ್ನೇ ಬದಿಗಿಟ್ಟು ಹಲವರು ತಡರಾತ್ರಿ 10 ಗಂಟೆಯ ಬಳಿಕ ಊಟ ತಿನ್ನುತ್ತಾರೆ. ಅಸಲಿಗೆ, ನೀವು ರಾತ್ರಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡಬೇಕು. ಇದರಿಂದ ಯಾವ ರೀತಿಯ ಕಾಯಿಲೆಗಳಿಂದ ದೂರವಿರಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವ ಮುನ್ನ ಹಲವಾರು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಮತ್ತು ನಿದ್ರೆ ಸರಿಯಾಗಿ ಆಗಲು ಸಹಾಯವಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹವು ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಆದರೆ ತಡವಾಗಿ ಊಟ ಮಾಡಿದಲ್ಲಿ, ದೇಹದ ಸಿರ್ಕಾಡಿಯನ್ ಲಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜೊತೆಗೆ ಸಮಯವಲ್ಲದ ಸಮಯಕ್ಕೆ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ರಾತ್ರಿಯಿಡೀ ಸಕ್ರಿಯವಾಗಿದ್ದು ಕೆಲಸ ಮಾಡುತ್ತದೆ. ಆಗ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯ ಕೂಡ ಹೆಚ್ಚಾಗುತ್ತದೆ.
ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 36 ರಿಂದ 75 ವರ್ಷದ 139 ಓವರ್‌ವೆಟ್ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡಿದ್ದು, ಅವರಲ್ಲಿ ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದು ಅವರನ್ನು ಎರಡು ಗುಂಪುಗಳಲ್ಲಿ ವಿಂಗಡನೆ ಮಾಡಿದ್ದಾರೆ. ಅದರಲ್ಲಿ ಒಂದು ಗುಂಪು 16 ಗಂಟೆಗಳ ಉಪವಾಸ, ಮತ್ತೊಂದು ಗುಂಪು 13 ಗಂಟೆಗಳ ಉಪವಾಸವಿದ್ದು, ಎರಡೂ ಗುಂಪುಗಳಿಗೂ ಮಲಗುವ 3 ಗಂಟೆಗಳ ಮೊದಲು ಊಟ ಕೊಟ್ಟು ಬೆಳಕು ಕಡಿಮೆ ಇರುವಂತಹ ಜಾಗದಲ್ಲಿರಲು ಸಲಹೆ ನೀಡಲಾಗಿತ್ತು. ಹೆಚ್ಚು ಉಪವಾಸ ಮಾಡಿದ ಗುಂಪಿನಲ್ಲಿ ರಕ್ತದ ಒತ್ತಡ ಕಡಿಮೆಯಾಯಿತು, ಶುಗರ್ ನಿಯಂತ್ರಣಕ್ಕೆ ಬಂದಿತು ಮತ್ತು ಇನ್ಸುಲಿನ್ ಸಂವೇದನಾಶೀಲತೆ ಹಾಗೂ ಗ್ಲೂಕೋಸ್ ಟಾಲರೆನ್ಸ್ ಕೂಡ ಉತ್ತಮವಾಯಿತು.
ರಾತ್ರಿ ಊಟವನ್ನು ಸಂಜೆ 8 ಗಂಟೆಗೂ ಮುಂಚೆ ಮುಗಿಸಿಕೊಳ್ಳಿ, ರಾತ್ರಿ 11 ಗಂಟೆಗೂ ಮುಂಚೆ ಮಲಗಲು ಪ್ರಯತ್ನಿಸಿ, ಈ ನಿಯಮವನ್ನು ಪಾಲಿಸುವ ಮೊದಲು ಡಾಕ್ಟರ್ ಸಲಹೆ ಪಡೆಯುವುದು ಅತ್ಯಗತ್ಯ.
https://www.newsics.com/2026/03/20/iran-shoots-down-the-most-advanced-f-35-fighter-jet/