newsics.com/ನ್ಯೂಸಿಕ್ಸ್
ರಾಜ್ಯದ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಜೂನ್ 3 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಜೂನ್ 16ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗಿ 14 ದಿನಗಳು ಕಳೆದಿವೆ. ನೂತನ ಸಿಎಂ ಆಡಳಿತದಲ್ಲಿ ಹಲವು ನಿರೀಕ್ಷೆಗಳು ಇವೆ. ಇದೀಗ ಆರಂಭದಲ್ಲೇ ಡಿಕೆಶಿ ಗಮನ ಸೆಳೆಯೋ ಐದು ಹೆಜ್ಜೆಗಳು ಇಟ್ಟಿದ್ದಾರೆ.
ಈ ಮೂಲಕ ಮುಂದಿನ ದಿನಗಳಲ್ಲಿ ಆಡಳಿತದಲ್ಲಿ ಮತ್ತಷ್ಟು ಉತ್ತಮ ಕ್ರಮಗಳು ಗೋಚರಿಸಲಿವೆ ಎಂಬ ಸುಳಿವನ್ನು ನೀಡಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಯಾರಾದರೂ 10 ರೂಪಾಯಿ ಲಂಚ ಕೇಳಿದರೂ ನನಗೆ ಕರೆ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ. ಈ ಮೂಲಕ ನಮ್ಮದು ಲಂಚ ಮುಕ್ತ ಸರ್ಕಾರ ಎಂಬ ಸಂದೇಶ ರವಾನಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಡಿಸಿ, ಎಸ್‌ಪಿ, ಜಿಲ್ಲಾ ಪಂಚಾಯತ್ ಸಿಇಓಗಳ ಸಮ್ಮುಖದಲ್ಲೇ ಡಿಕೆ ಶಿವಕುಮಾರ್ ಈ ಸಂದೇಶವನ್ನು ರವಾನೆ ಮಾಡಿದ್ದಾರೆ. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಲಂಚದ ಬೇಡಿಕೆ ಇಟ್ಟರೆ ಫೋನ್ ಮಾಡಲು ನಂಬರ್ ಬೋರ್ಡ್ ಕಡ್ಡಾಯವಾಗಿ ಹಾಕಬೇಕು ಎಂದು ಸೂಚಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಕ್ಕೆ ಲಂಚ ಕೇಳಿದರೆ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದಾರೆ.
ಸರ್ಕಾರಿ ಕಚೇರಿಗಳು ಅಂದರೆ ಅಲ್ಲಿ ಸಮಯದ ಪರಿಪಾಲನೆ ಇಲ್ಲ ಎಂಬ ಆರೋಪ ಇದೆ. ಅದರೆ ಅದಕ್ಕೆ ತದ್ವಿರುದ್ಧವಾಗಿ ಡಿಕೆ ಶಿವಕುಮಾರ್ ನಡೆದುಕೊಂಡಿದ್ದಾರೆ. ಸರ್ಕಾರಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರಬೇಕು ಎಂಬ ಸೂಚನೆ ನೀಡಿದ್ದಾರೆ. 10 ಗಂಟೆಗೆ ಸರಿಯಾಗಿ ಕಚೇರಿಗೆ ಬರಬೇಕು ಎಂದು ಸೂಚಿಸಿದ್ದಾರೆ. ರಾಜ್ಯದ ಸರ್ಕಾರಿ ಅಧಿಕಾರಿ/ ಸಿಬ್ಬಂದಿ ಚಲನವಲನ ದಾಖಲಿಸಲು ಕರ್ತವ್ಯ ಆಪ್ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಮೇಲೆ ಎಐ ಕಣ್ಗಾವಲು ಇಡಲಾಗಿದೆ. ಸಿಎಂ ಡಿಕೆ ಶಿವಕುಮಾರ್ ಈ ನಡೆ ಗಮನ ಸೆಳೆಯುವಂತಿದೆ.
ಗೃಹ ಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳು ಅನರ್ಹರ ಪಾಲಾಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಆದ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸಲು ಮುಂದಾಗಿದ್ದಾರೆ. ಅನರ್ಹರಿಗೆ ಲಾಭ ತಪ್ಪಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇಟ್ಟಿದ್ದಾರೆ. ಗೃಹ ಜ್ಯೋತಿ ಯೋಜನೆಯ ಹಣ ಮೃತರ ಖಾತೆಗೂ ಜಮೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕರಣೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ.
ಆಡಳಿತ ಸುಲಲಿತವಾಗಿ ಸಾಗಬೇಕಾದರೆ ಅಧಿಕಾರಿಗಳ ಸಹಕಾರ ಹಾಗೂ ಸ್ಪಂದನೆ ಅತ್ಯಗತ್ಯ. ಹಾಗಾಗಿ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸ್ವತಃ ಅವರಿದ್ದಲ್ಲಿ ಹೋಗಿ ಕೈಮುಗಿದು ಅವರ ಸಹಕಾರ ಕೋರಿದ್ದಾರೆ. ಈ ಮೂಲಕ ಭಿನ್ನ ನಡೆಯನ್ನು ಅನುಸರಿಸಿದ್ದಾರೆ. ಭವಿಷ್ಯದಲ್ಲಿ ಇದು ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂಬುವುದು ಕೂಡಾ ಕುತೂಹಲಕಾರಿಯಾಗಿದೆ.
ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ವಿಪಕ್ಷಗಳ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಪಕ್ಷಾತೀತವಾಗಿ ಮಾಜಿ ಸಿಎಂ ಗಳನ್ನು ಭೇಟಿ ಮಾಡಿ ಸಲಹೆ ಸಹಕಾರ ನೀಡಿದ್ದರು. ಈ ಮೂಲಕ ಸಂಘರ್ಷದ ಹಾದಿಯ ಬದಲಾಗಿ ಸೌಹಾರ್ದದ ಹಾದಿಯತ್ತ ಹೆಜ್ಜೆ ಇಟ್ಟಿದ್ದರು. ಅದನ್ನು ಮತ್ತಷ್ಟು ಮುಂದುವರಿಸುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಪ್ರಯತ್ನ ನಡೆಸುತ್ತಿದ್ದಾರೆ. ವಿಪಕ್ಷಗಳ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಹೆಚ್ಚಾಗಿ ಮಾಡದೆ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಪ್ರಯತ್ನದಲ್ಲಿದ್ದಾರೆ.
ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ