newsics.com
ಹಾರ್ಮುಜ್ ಜಲಸಂಧಿಯ ಸಮುದ್ರದ ಮಧ್ಯೆ ಭಾರತದ ಸಾಲು ಸಾಲು ಹಡಗುಗಳು ಅತಂತ್ರವಾಗಿ ನಿಂತಿವೆ. ಅಡುಗೆ ಅನಿಲ ಮತ್ತು ಕಚ್ಚಾ ತೈಲ ಹೊತ್ತ ಈ ಬೃಹತ್ ನೌಕೆಗಳು ಇರಾನ್ನ ಒಂದು ಸಣ್ಣ ನಿರ್ಧಾರದ ಮೇಲೆ ನಿಂತಿದೆ.
ಇಂಧನ ಭದ್ರತೆಯ ದೃಷ್ಟಿಯಿಂದ ಈ ಬಿಕ್ಕಟ್ಟು ಭಾರತಕ್ಕೆ ದೊಡ್ಡ ಸವಾಲಾಗಿದ್ದು, ಇರಾನ್ ಹಸಿರು ನಿಶಾನೆ ತೋರಿದರೆ ಮಾತ್ರ ಈ ಸಮುದ್ರದ ‘ಟ್ರಾಫಿಕ್ ಜಾಮ್’ ನಿವಾರಣೆಯಾಗಲಿದೆ. ಇಡೀ ದೇಶ ಈಗ ಇರಾನ್ನ ಮುಂದಿನ ನಡೆಯನ್ನೇ ಕುತೂಹಲದಿಂದ ಗಮನಿಸುತ್ತಿದೆ.
ಈ ಹಡಗುಗಳಲ್ಲಿ ಪ್ರಮುಖ ಇಂಧನ ಸರಕುಗಳಿವೆ. ನಾಲ್ಕು ಹಡಗುಗಳು ಕಚ್ಚಾ ತೈಲವನ್ನು ಸಾಗಿಸುತ್ತಿದ್ದರೆ, ಆರು ಹಡಗುಗಳು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊತ್ತು ಸಾಗುತ್ತಿವೆ. ಇದಲ್ಲದೆ ಒಂದು ಹಡಗು ದ್ರವೀಕೃತ ನೈಸರ್ಗಿಕ ಅನಿಲ (LNG) ಹೊತ್ತು ಸಾಗುತ್ತಿದೆ. ಯುದ್ಧ ಪರಿಸ್ಥಿತಿಯಿಂದಾಗಿ ಸಮುದ್ರ ಸಂಚಾರದಲ್ಲಿ ಉಂಟಾದ ಅಡ್ಡಿಯಿಂದಾಗಿ ಈ ಹಡಗುಗಳ ಚಲನೆ ನಿಧಾನಗೊಂಡಿದೆ. ಅಲ್ಲದೇ ಇತ್ತೀಚಿನ ವರದಿಗಳ ಪ್ರಕಾರ, ಭಾರತಕ್ಕೆ ಬರುತ್ತಿದ್ದ ಸುಮಾರು 22 ಹಡಗುಗಳು ಹಾರ್ಮುಜ್ ಜಲಸಂಧಿಯ ಸಮೀಪ ಸಿಲುಕಿಕೊಂಡಿದ್ದು, ಅವುಗಳನ್ನು ಸುರಕ್ಷಿತವಾಗಿ ಸಾಗಿಸಲು ಭಾರತ ಸರ್ಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿದೆ.
ಭಾರತದ ವಿದೇಶಾಂಗ ಸಚಿವಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಧನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಅವರು ನೀಡಿದ ಮಾಹಿತಿಯ ಪ್ರಕಾರ, ಭಾರತವು ಪಶ್ಚಿಮ ಏಷ್ಯಾದ ಹಲವು ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಇಂಧನ ಭದ್ರತೆ ಭಾರತದ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವು ಗಲ್ಫ್ ಪ್ರದೇಶದ ದೇಶಗಳು ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಚರ್ಚೆ ನಡೆಸುತ್ತಿದೆ. ವಿಶೇಷವಾಗಿ ಗಲ್ಫ್ ಕೋ-ಆಪರೇಷನ್ ಕೌನ್ಸಿಲ್ ರಾಷ್ಟ್ರಗಳು, ಇರಾನ್, ಯುಎಸ್, ಮತ್ತು ಇಸ್ರೇಲ್ ಜತೆ ಸಂವಾದ ಮುಂದುವರಿದಿದೆ. ಯುದ್ಧದ ಪರಿಣಾಮದಿಂದ ಉಂಟಾಗಿರುವ ಅಡಚಣೆಗಳನ್ನು ಕಡಿಮೆ ಮಾಡಲು ಈ ರಾಜತಾಂತ್ರಿಕ ಪ್ರಯತ್ನಗಳು ಪ್ರಮುಖವಾಗಿವೆ.
ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇರ್ಶ್ ಕುಮಾರ್ ಸಿನ್ಹಾ ಅವರ ಪ್ರಕಾರ, ಸಿಕ್ಕಿಬಿದ್ದ ಹಡಗುಗಳಲ್ಲಿ ಹಲವು ಪ್ರಮುಖ ಇಂಧನ ಸಾಗಣೆಗಳಿವೆ. ಸಮುದ್ರ ಸಂಚಾರದಲ್ಲಿ ಉಂಟಾದ ಅನಿಶ್ಚಿತತೆ ಈ ಹಡಗುಗಳ ಸಂಚಾರವನ್ನು ತಾತ್ಕಾಲಿಕವಾಗಿ ಅಡ್ಡಿಪಡಿಸಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಸೈನಿಕ ಕಾರ್ಯಾಚರಣೆ ಆರಂಭಿಸಿದ ನಂತರ, ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಅನೇಕ ಹಡಗುಗಳ ಮೇಲೆ ನಿರ್ಬಂಧ ಹೇರಿತ್ತು.
ಈ ಜಲಸಂಧಿ ಜಾಗತಿಕ ಇಂಧನ ವ್ಯಾಪಾರದಲ್ಲಿ ಅತ್ಯಂತ ಪ್ರಮುಖವಾಗಿದೆ. ಸಮುದ್ರ ಮಾರ್ಗದ ಮೂಲಕ ಸಾಗುವ ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ಎಲ್ಎನ್ಜಿ ಪೂರೈಕೆಯ ಸುಮಾರು 20 ಶೇಕಡಾ ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಆದ್ದರಿಂದ ಇಲ್ಲಿ ಉಂಟಾಗುವ ಯಾವುದೇ ಅಡಚಣೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ.
ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಸೇರಿದ ದೊಡ್ಡ ಅನಿಲ ಸಾಗಣೆ ಹಡಗು “ಶಿವಾಲಿಕ್” ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಗಲ್ಫ್ ಆಫ್ ಓಮನ್ ಪ್ರದೇಶಕ್ಕೆ ಪ್ರವೇಶಿಸಿದೆ. ನಂತರ ಇದೇ ಕಂಪನಿಗೆ ಸೇರಿದ ಮತ್ತೊಂದು ಹಡಗು “ನಂದಾ ದೇವಿ” ಕೂಡ ಜಲಸಂಧಿಯನ್ನು ದಾಟಿದೆ. ಈ ಎರಡು ಹಡಗುಗಳು ಸೇರಿ ಸುಮಾರು 92,000 ಟನ್ಗಳಷ್ಟು ಎಲ್ಪಿಜಿ ಸಾಗಿಸುತ್ತಿವೆ. ವಿದೇಶಾಂಗ ಸಚಿವಾಲಯದ ಮಾಹಿತಿಯ ಪ್ರಕಾರ, ಈ ಹಡಗುಗಳು ಮಾರ್ಚ್ 16 ಮತ್ತು 17 ರಂದು ಗುಜರಾತಿನ ಮುಂದ್ರಾ ಪೊರ್ಟ್ ಮತ್ತು ಕಂಡ್ಲಾ ಪೋರ್ಟ್ ಬಂದರುಗಳಿಗೆ ತಲುಪಲಿವೆ.
ಇರಾನ್ ರಾಯಭಾರಿ ಹೇಳಿದ್ದೇನು?
ಇದರ ನಡುವೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತಕ್ಕೆ ಇರಾನ್ ರಾಯಭಾರಿ ಮೊಹ್ಮದ್ ಮಹತ್ವದ ಹೇಳಿಕೆ ನೀಡಿದ್ದಾರೆ. ಟೆಹ್ರಾನ್ ಕೆಲವು ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅವಕಾಶ ನೀಡಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಭಾರತಕ್ಕೆ ಸ್ವಲ್ಪ ಮಟ್ಟಿನ ನಿರಾಳತೆ ದೊರೆತಿದೆ. ಇದೇ ಸಮಯದಲ್ಲಿ ಭಾರತವು ಬಹುಪಕ್ಷೀಯ ರಾಜತಾಂತ್ರಿಕತೆಯನ್ನೂ ಮುಂದುವರೆಸುತ್ತಿದೆ. ಪ್ರಸ್ತುತ ಬ್ರಿಕ್ಸ್ ಗುಂಪಿನ ಅಧ್ಯಕ್ಷತೆ ಭಾರತ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳಲ್ಲಿ ಒಮ್ಮತ ನಿರ್ಮಿಸಲು ಪ್ರಯತ್ನ ನಡೆಯುತ್ತಿದೆ. ಬ್ರೆಜಿಲ್, ರಷ್ಯಾ, ಚೀನಾ, ಸೌಥ್ ಆಫ್ರಿಕಾ ಸೇರಿ ಹಲವು ದೇಶಗಳೊಂದಿಗೆ ಭಾರತ ಸಂವಾದ ನಡೆಸುತ್ತಿದೆ.