newsics.com
ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ಯುದ್ಧದ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ತನ್ನ ಚಿನ್ನದ ಸಂಗ್ರಹವನ್ನು ನಿರಂತರವಾಗಿ ಹೆಚ್ಚಾಗಿಸಿದೆ.
ಚೀನಾದ ಕೇಂದ್ರ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಫೆಬ್ರವರಿ ತಿಂಗಳಲ್ಲಿ ತನ್ನ ಚಿನ್ನದ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿದೆ. ಶನಿವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಪಿಬಿಒಸಿ ತನ್ನ ಬುಲಿಯನ್ ಹೋಲ್ಡಿಂಗ್‌ಗಳನ್ನು 30,000 ಟ್ರಾಯ್ ಔನ್ಸ್‌ಗಳಷ್ಟು ಹೆಚ್ಚಿಸಿದೆ. ಇದರೊಂದಿಗೆ ಚೀನಾದ ಒಟ್ಟು ಚಿನ್ನದ ಮೀಸಲುಗಳು 74.22 ಮಿಲಿಯನ್ ಫೈನ್ ಟ್ರಾಯ್ ಔನ್ಸ್‌ಗಳಿಗೆ ತಲುಪಿವೆ.
ಇದು ಚೀನಾ ನಿರಂತರವಾಗಿ ಚಿನ್ನ ಸಂಗ್ರಹಿಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ವಿಶೇಷವಾಗಿ ಕಳೆದ 16 ತಿಂಗಳುಗಳಿಂದ ಚೀನಾ ಪ್ರತಿ ತಿಂಗಳು ಚಿನ್ನವನ್ನು ಖರೀದಿಸುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಚೀನಾದ ಚಿನ್ನದ ಸಂಗ್ರಹವು 74.22 ಮಿಲಿಯನ್ ಔನ್ಸ್ ಆಗಿದ್ದು, ಜನವರಿಯಲ್ಲಿ ಅದು 74.19 ಮಿಲಿಯನ್ ಔನ್ಸ್ ಆಗಿತ್ತು. ಈ ನಿರಂತರ ಖರೀದಿ ಚೀನಾದ ದೀರ್ಘಕಾಲದ ಆರ್ಥಿಕ ತಂತ್ರದ ಭಾಗವಾಗಿದೆ. ಡಾಲರ್ ಅವಲಂಬನೆಯನ್ನು ಕಡಿಮೆ ಮಾಡುವುದು ಹಾಗೂ ವಿದೇಶಿ ವಿನಿಮಯ ಮೀಸಲುಗಳನ್ನು ಹೆಚ್ಚು ಸುರಕ್ಷಿತ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಚೀನಾದ ಮುಖ್ಯ ಉದ್ದೇಶವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನ ಖರೀದಿಯಲ್ಲಿ ಏರಿಕೆ!
ಜಾಗತಿಕ ಮಟ್ಟದಲ್ಲಿ ಕೂಡ ಕೇಂದ್ರ ಬ್ಯಾಂಕುಗಳ ಚಿನ್ನ ಖರೀದಿಯಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಾಣುತ್ತಿದೆ. ವಿಶೇಷವಾಗಿ ಪೂರ್ವ ಏಷ್ಯಾ ಮತ್ತು ಮಧ್ಯ ಯುರೋಪಿನ ಕೆಲವು ದೇಶಗಳು ತಮ್ಮ ಚಿನ್ನದ ಸಂಗ್ರಹವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿವೆ. ಇದು ಜಾಗತಿಕ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.
ಚಿನ್ನದ ದರದಲ್ಲಿ ಕಾಣುತ್ತಿಲ್ಲ ಸ್ಥಿರ!
ಇದಾಗ್ಯೂ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿಯುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಎಸ್ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1.15 ಶೇಕಡಾ ಏರಿಕೆಯಾಗಿ ಸುಮಾರು 5,181.30 ಡಾಲರ್‌ಗೆ ತಲುಪಿದೆ. ಆದರೆ ಈ ವಾರದ ಅವಧಿಯಲ್ಲಿ ಒಟ್ಟಾರೆ ಚಿನ್ನದ ಬೆಲೆಯಲ್ಲಿ ಸುಮಾರು 3 ಶೇಕಡಾ ಇಳಿಕೆ ಕಂಡುಬಂದಿದೆ.
ತಜ್ಞರ ಪ್ರಕಾರ!
ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಚಿನ್ನದ ಮೇಲೆ ಬೇಡಿಕೆ ಮುಂದುವರಿಯುವ ಸಾಧ್ಯತೆ ಇದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ವಿಶ್ಲೇಷಕಿ ಮಾರಿಸಾ ಸಲೀಮ್ ಹೇಳುವಂತೆ, ಜಾಗತಿಕ ರಾಜಕೀಯ ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ. ಇದರಿಂದಾಗಿ ಕೇಂದ್ರ ಬ್ಯಾಂಕುಗಳು ಚಿನ್ನದಂತಹ ಸುರಕ್ಷಿತ ಆಸ್ತಿಗಳಲ್ಲಿ ಹೂಡಿಕೆಯನ್ನು ಮುಂದುವರಿಸಬಹುದು ಎಂದಿದ್ದಾರೆ. ಇವರ ಪ್ರಕಾರ, ವಿನಿಮಯ-ವಹಿವಾಟು ನಿಧಿಗಳ (ETF) ಮಾರುಕಟ್ಟೆಯಲ್ಲಿಯೂ ಚಿನ್ನದ ಮೇಲಿನ ಆಸಕ್ತಿ ಹೆಚ್ಚುತ್ತಿದೆ. ಯುಎಸ್‌ನಲ್ಲಿ ಪಟ್ಟಿಗೊಂಡಿರುವ ಚಿನ್ನದ ಇಟಿಎಫ್‌ಗಳು ಫೆಬ್ರವರಿಯಲ್ಲಿ ಸುಮಾರು 4.5 ಬಿಲಿಯನ್ ಡಾಲರ್ ನಿವ್ವಳ ಒಳಹರಿವು ದಾಖಲಿಸಿವೆ. ಇದು ಚಿಲ್ಲರೆ ಹೂಡಿಕೆದಾರರು ಮತ್ತು ದೊಡ್ಡ ಸಾಂಸ್ಥಿಕ ಹೂಡಿಕೆದಾರರು ಎರಡೂ ಚಿನ್ನದತ್ತ ಮುಖ ಮಾಡುತ್ತಿರುವುದನ್ನು ಸೂಚಿಸುತ್ತದೆ.