Subscribe ನ್ಯೂಸಿಕ್ಸ್ ಕನ್ನಡ
newsics.com
ಮಧ್ಯಪ್ರಾಚ್ಯದಲ್ಲಿ ಉಲ್ಬಣವಾಗುತ್ತಿರುವ ಯುದ್ಧಸನ್ನಿವೇಶದ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಬಹುದು ಹಾಗೂ ಇಂಧನದ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂಬ ವದಂತಿ ಹರಡುತ್ತಿದ್ದಂತೆ, ರಾಜ್ಯದ ಹಲವು ನಗರಗಳಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದ ಸಾಲು ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣ, ಬೆಂಗಳೂರಿನ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ಉದ್ದ ಸಾಲು ಕಂಡುಬಂದಿದೆ.
ಮುನ್ನೆಚ್ಚರಿಕೆಯಾಗಿ ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಧಾವಿಸಿರುವುದರಿಂದ ಕೆಲವೆಡೆ ತಾತ್ಕಾಲಿಕ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಉಡುಪಿ ಮತ್ತು ಮಂಗಳೂರಿನ ಎಂಆರ್‌ಪಿಎಲ್ ಘಟಕಗಳಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ, ಸದ್ಯಕ್ಕೆ ಯಾವುದೇ ಆತಂಕ ಅಗತ್ಯವಿಲ್ಲ ಎಂಬ ಮಾಹಿತಿ ಹೊರಬಿದ್ದಿತ್ತು. ಆದಾಗ್ಯೂ, ಯುದ್ಧದ ವ್ಯಾಪ್ತಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತೆ ಭೀತಿ ಮೂಡಿದೆ.
ಇದುವರೆಗೆ ಇರಾನ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕುವೈತ್, ಬಹ್ರೈನ್ ಹಾಗೂ ಕತಾರ್ ದೇಶಗಳಿಗೆ ಸೀಮಿತವಾಗಿದ್ದ ಸಂಘರ್ಷ ಇದೀಗ ಲೆಬನಾನ್ ಮತ್ತು ಸೈಪ್ರಸ್ ಸೇರಿದಂತೆ ಒಟ್ಟು 12ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಸೈಪ್ರಸ್‌ನಲ್ಲಿರುವ ಬ್ರಿಟನ್ ಸೇನಾ ನೆಲೆಗಳ ಮೇಲೆ ಇರಾನ್ ಡ್ರೋನ್ ದಾಳಿಗೆ ಯತ್ನಿಸಿರುವ ವರದಿಗಳು ಹೊರಬಂದಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಫ್ರಾನ್ಸ್, ಬ್ರಿಟನ್, ಜರ್ಮನಿ ಸೇರಿದಂತೆ ನ್ಯಾಟೋ ರಾಷ್ಟ್ರಗಳು ಅಮೆರಿಕಾ–ಇಸ್ರೇಲ್ ಪರವಾಗಿ ನಿಲ್ಲಲು ಮುಂದಾಗಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.