https://youtube.com/shorts/4DdUNKT1F8Q?si=WqCYQodDieS5bX6t
Subscribe ನ್ಯೂಸಿಕ್ಸ್ ಕನ್ನಡ
newsics.com
ಚಿಕ್ಕಬಳ್ಳಾಪುರ: ಇರಾನ್ ನೆಲದಲ್ಲಿ ಯುದ್ಧ ತೀವ್ರವಾಗುತ್ತಿದ್ದರೆ ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತದೆ.
ಇರಾನ್ ಮತ್ತು ಇಸ್ರೇಲ್ ಯುದ್ಧದ ಕ್ಷಣ, ಕ್ಷಣದ ಮಾಹಿತಿ, ಬೆಳವಣಿಗೆಗಳು ಈ ಗ್ರಾಮದ ಜನರನ್ನು ತಲುಪುತ್ತವೆ. ಕ್ಷಿಪಣಿ ದಾಳಿ ವೇಳೆ ಅಲ್ಲಿ ಮೊಳಗುವ ಸೈರನ್ ಶಬ್ದ ಮೊಬೈಲ್ ಕರೆಯ ಮೂಲಕ ಅಲೀಪುರದಲ್ಲೂ ಪ್ರತಿಧ್ವನಿಸುತ್ತದೆ. ಅಲ್ಲಿ ಕ್ಷಿಪಣಿ ಬಿದ್ದರೆ ಇಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆ. ಇರಾನ್‌ನಲ್ಲಿರುವ ಗ್ರಾಮಸ್ಥರು ಸುರಕ್ಷಿತವಾಗಿರಲಿ. ಅವರಿಗೆ ಏನೂ ಆಗದಿರಲಿ ಎಂದು ಗ್ರಾಮದಲ್ಲಿ ನಿತ್ಯ ಪ್ರಾರ್ಥನೆ ನಡೆಯುತ್ತವೆ.
ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಶಿಯಾ ಮುಸ್ಲಿಂ ಸಮುದಾಯದವರೇ ಇರುವ ಅಲೀಪುರ ಗ್ರಾಮಕ್ಕೂ ದೂರದ ಇರಾನ್ ದೇಶದ ಜೊತೆಗೆ ಬಹಳಷ್ಟು ನಂಟಿದ್ದು, ಬಾಂಧವ್ಯದ ಕೊಂಡಿ ಬೆಸೆದುಕೊಂಡಿದೆ. ಈ ಗ್ರಾಮದ 10 ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಇರಾನ್ ದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪಡೆಯಲು ಇರಾನ್‌ನಲ್ಲೇ ನೆಲೆಸಿದ್ದಾರೆ. ಪ್ರಮುಖವಾಗಿ ಇರಾನ್‍ನ ಮಶದ್‌ನ ಪ್ರಮುಖ ಧಾರ್ಮಿಕ ಕೇಂದ್ರ ಪವಿತ್ರ ಸ್ಥಳ. ಹಾಗಾಗಿಯೇ ಪ್ರತಿ ವರ್ಷವೂ ನೂರಾರು ಮಂದಿ ಇರಾನ್‌ನ ಮಶದ್‌ಗೆ ಭೇಟಿ ಮಾಡಿ ಪ್ರಾರ್ಥನೆ ಸಲ್ಲಿಸಿ ಬರುತ್ತಾರೆ.
ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಅಯಾತೊಲ್ಲಾ ಖಮೇನಿ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ.
ಅಮೆರಿಕ ಮತ್ತು ಇಸ್ರೇಲ್ ಕ್ಷಿಪಣಿಗಳು ಇರಾನ್ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಅಲ್ಲಿರುವ ತಮ್ಮ ಸಂಬಂಧಿಕರು, ಬಂಧು, ಬಳಗ, ಮಕ್ಕಳನ್ನು ಸಂಪರ್ಕಿಸಲು ಅಲೀಪುರದ ಜನರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇರಾನ್‌ನಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡಿರುವ ಕಾರಣ ಸಂಪರ್ಕ ಸಾಧ್ಯವಾಗುತ್ತಿಲ್ಲ
‘ಇರಾನ್‌ನಲ್ಲಿರುವ ಅಕ್ಕನ ಮಗನಿಗೆ ಬೆಳಗ್ಗೆ 11ರಿಂದ ಫೋನ್ ಮಾಡುತ್ತಲೇ ಇದ್ದೇನೆ. ಆತ ಸಂಪರ್ಕಕ್ಕೆ ಸಿಗುತ್ತಿಲ್ಲ’ ಅಲೀಪುರದ ಸೈಯದ್ ಮೆಹೆದಿ ಆತಂಕ ಹಂಚಿಕೊಂಡರು.
2025ರ ಜೂನ್‌ನಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆದಾಗ 105 ಜನರು ಇರಾನ್ ತೊರೆದು ಸ್ವಗ್ರಾಮ ಅಲೀಪುರಕ್ಕೆ ಬಂದಿದ್ದರು. ಶಾಂತಿ ನೆಲೆಸಿದ ತರುವಾಯ ಇರಾನ್‌ಗೆ ಮರಳಿದ್ದರು.