https://youtube.com/shorts/tAQS6h_SZWA?si=f1t_2CedcPuoHdto
Subscribe ನ್ಯೂಸಿಕ್ಸ್ ಕನ್ನಡ
newsics.com
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಚಿತ್ರಗಳು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇಬ್ಬರು ವಧು-ವರರಾಗಿ ಅದ್ಭುತವಾಗಿ ಕಾಣುತ್ತಿದ್ದಾರೆ. ಇಬ್ಬರು ಧರಿಸಿರುವ ಉಡುಗೆಗಳ ಬಗ್ಗೆ ಸಖತ್ ಪ್ರಶಂಸೆ ವ್ಯಕ್ತವಾಗಿದೆ.
ಅಂದಹಾಗೆ ಈ ಇಬ್ಬರ ಮದುವೆ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ.
ಅನಾಮಿಕಾ ಖನ್ನಾ, ಭಾರತದ ಮಾತ್ರವಲ್ಲದ ಹಾಲಿವುಡ್ನ ಸ್ಟಾರ್ ನಟ-ನಟಿಯರು ಮತ್ತು ಪಾಪ್ ತಾರೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿರುವ ಉಡುಗೆಯನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್ಫ್ರೆ, ಕೆಲ್ಲಿ ರೋಲಂಡ್, ಬಿಯಾನ್ಸೆ, ಕರ್ದಾಶಿಯನ್ಸ್ ಇನ್ನೂ ಹಲವರು ಉಟ್ಟಿದ್ದಾರೆ. ಅಂಬಾನಿ ಮದುವೆಗೆ ಬಂದ ಬಹುತೇಕ ವಿದೇಶಿ ಸೆಲೆಬ್ರಿಟಿಗಳು ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆಯನ್ನೇ ತೊಟ್ಟಿದ್ದರು. ಮಾತ್ರವಲ್ಲದೆ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್, ಹಳದಿ ಶಾಸ್ತ್ರದ ಉಡುಗೆಯನ್ನು ವಿನ್ಯಾಸ ಮಾಡಿದ್ದು ಸಹ ಅನಾಮಿಕಾ ಅವರೇ. ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆ ತೊಟ್ಟೇ ನಡೆದಿದ್ದರು.
ಅನಾಮಿಕಾ ಖನ್ನಾ, ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ಮೂಲಕ ಅನಾಮಿಕ ಮೂಲತಃ ಭರತನಾಟ್ಯ ಕಲಾವಿದೆ ಜೊತೆಗೆ ಚಿತ್ರಕಲಾ ನಿಪುಣೆ ಸಹ. ಅವರು ಫ್ಯಾಷನ್ ಡಿಸೈನ್ ಅನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರು ಆಸಕ್ತಿಯಿಂದ ವಸ್ತ್ರವಿನ್ಯಾಸದ ಕಡೆಗೆ ಬಂದವರು. ವಿನ್ಯಾಸಗಳನ್ನು ಅಭ್ಯಾಸ ಮಾಡುತ್ತಾ, ಸ್ವಂತ ಕಲಿಕೆಯ ಮೂಲಕ ಫ್ಯಾಷನ್ ಡಿಸೈನರ್ ಆದವರು ಅನಾಮಿಕಾ ಖನ್ನಾ.
ಇಬ್ಬರ ಉಡುಗೆಗಳ ಹಿಂದಿನ ಕಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಾಮಿಕಾ, ‘ಕೆಂಪು ಬಣ್ಣದ ಅಂಚಿನ ಚೌಕಟ್ಟು ಹೊಂದಿರುವ ರಶ್ಮಿಕಾ ಮಂದಣ್ಣ ಅವರ ಲುಕ್ ಪವಿತ್ರ ಕಲಾತ್ಮಕತೆಯ ಆಚರಣೆಯಾಗಿದೆ. ದೇವಾಲಯದ ವಿಶಿಷ್ಟತೆಗಳನ್ನು ಸೀರೆಯ ಅಂಚಿನ ಮೇಲೆ ಸಂಕೀರ್ಣವಾಗಿ ಕಸೂತಿ ಮಾಡಲಾಗಿದೆ, ಹೈದರಾಬಾದ್‌ನ ಪಾರಂಪರಿಕ ದೇವಾಲಯದ ಕೆತ್ತನೆಗಳು ಮತ್ತು ಆಧ್ಯಾತ್ಮಿಕತೆಯನ್ನು ಈ ವಿನ್ಯಾಸ ಪ್ರತಿಧ್ವನಿಸುತ್ತದೆ. ಪ್ರಾಚೀನ ಚಿನ್ನವನ್ನು ಬಳಸಿ ಕೈಯಿಂದ ಮಾಡಿರುವ ಕಸೂತಿ ಅದ್ಭೂತ ಕಲಾತ್ಮಕತೆಯನ್ನು ನೀಡಿದೆ. ಸೀರೆಯನ್ ಕೇವಲ ಉಡುಗೆ ಮಾತ್ರ ಆಗಿಸದೆ ಭಕ್ತಿ ಮತ್ತು ಕರಕುಶಲತೆಯ ಕ್ಯಾನ್ವಾಸ್ ಆಗಿ ಪರಿವರ್ತಿಸಲಾಗಿದೆ. ಜೊತೆಗೆ ಸ್ತ್ರೀ ಶಕ್ತಿಯನ್ನು ಸಹ ಈ ಉಡುಗೆ ಪ್ರತಿನಿಧಿಸುತ್ತಿದೆ’ ಎಂದಿದ್ದಾರೆ.
ಇನ್ನು ವಿಜಯ್ ದೇವರಕೊಂಡ ಅವರ ಉಡುಗೆ ಅವರ ಲುಕ್ ನ ಹಿಂದಿನ ಆಲೋಚನೆಯ ಬಗ್ಗೆ ಹೇಳಿರುವ ಅನಾಮಿಕಾ, ‘ಹೈದರಾಬಾದ್‌ನ ಜವಳಿ ಪರಂಪರೆಯಲ್ಲಿ ಬೇರೂರಿರುವ ವಿಜಯ್ ದೇವರಕೊಂಡ ಅವರ ವಿವಾಹ ಉಡುಪು ವನಸಿಂಗರಂ (ನೇಯ್ಗೆಯ ವಿಧಾನ) ನೇಯ್ಗೆಯಿಂದ ಮಾಡಿದ್ದಾಗಿದೆ. ದಂತದ ನುಣುಪಿನ ಧೋತಿಯನ್ನು ಸಿಂಧೂರ ಅಂಗವಸ್ತ್ರದೊಂದಿಗೆ ಜೊತೆ ಮಾಡಲಾಗಿದೆ. ಇದು ಅರಣ್ಯ ಮತ್ತು ದೇವಾಲಯದ ಕಲಾತ್ಮಕತೆಯಿಂದ ಕಸೂತಿ ಮಾಡಲ್ಪಟ್ಟಿದೆ. ಶಕ್ತಿ, ವಂಶಾವಳಿ ಮತ್ತು ಪವಿತ್ರ ವಾಸ್ತುಶಿಲ್ಪದ ಸಂಕೇತಗಳು ಅವರ ಉಡುಗೆಯಲ್ಲಿ ಪ್ರತಿನಿಧಿಸುತ್ತವೆ ಎಂದಿದ್ದಾರೆ. ವಿಜಯ್ ದೇವರಕೊಂಡ ಅವರು ನೇಕಾರರ ಸಮುದಾಯಕ್ಕೆ ಸೇರಿದವರೇ ಆಗಿರುವ ಕಾರಣ ಅದನ್ನು ಗಮನದಲ್ಲಿಟ್ಟುಕೊಂಡೇ ಅವರ ಉಡುಪನ್ನು ವಿನ್ಯಾಸ ಮಾಡಲಾಗಿದೆ.