https://youtube.com/shorts/OcRzQ68lM7k?si=kBWGhvCtygy6kinF
Subscribe ನ್ಯೂಸಿಕ್ಸ್ ಕನ್ನಡ
newsics.com
ದೆಹಲಿ ನ್ಯಾಯಾಲಯವು ಶುಕ್ರವಾರ ಮಾಜಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿ ಅಬಕಾರಿ ನೀತಿ ಪ್ರಕರಣದ ಎಲ್ಲಾ 23 ಆರೋಪಿಗಳನ್ನು ಖುಲಾಸೆಗೊಳಿಸಿದೆ.
ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ಜಿತೇಂದರ್ ಸಿಂಗ್ ಅವರು ಆರೋಪಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಆರಂಭಿಸಿದ ಪ್ರಕರಣವನ್ನು ಮುಕ್ತಾಯಗೊಳಿಸುವ ಆದೇಶವನ್ನು ಹೊರಡಿಸಿದ್ದಾರೆ. “ಅಬಕಾರಿ ನೀತಿಯಲ್ಲಿ ಯಾವುದೇ ವ್ಯಾಪಕ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ” ಎಂದು ನ್ಯಾಯಾಲಯ ತೀರ್ಪು ನೀಡಿದೆ.
ದೆಹಲಿ ಸರ್ಕಾರವು 2021-22 ಅಬಕಾರಿ (ಮದ್ಯ) ನೀತಿಯನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಸರ್ಕಾರವು ಮದ್ಯ ಮಾರಾಟದಿಂದ ಸಂಪೂರ್ಣವಾಗಿ ಹೊರಬಂದು, ಖಾಸಗಿ ವ್ಯಕ್ತಿಗಳಿಗೆ ಪರವಾನಗಿ ನೀಡಿತು. ಆದರೆ ಈ ನೀತಿಯನ್ನು ರೂಪಿಸುವಾಗ ಕೆಲವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಉದ್ದೇಶಪೂರ್ವಕವಾಗಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ಖಾಸಗಿ ಕಂಪನಿಗಳಿಗೆ ಲಾಭವಾಗುವಂತೆ ನೀತಿ ನಿರೂಪಿಸಿ ಸುಮಾರು ₹100 ಕೋಟಿ ಲಂಚ ಪಡೆಯಲಾಗಿದೆ ಎಂದು ದೂರಲಾಗಿತ್ತು. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ನೀಡಿದ ದೂರಿನ ಮೇರಿಗೆ ಸಿಬಿಐ ಪ್ರಕರಣ ದಾಖಲಿಸಿತ್ತು. ಜಾರಿ ನಿರ್ದೇಶನಾಲಯವೂ (ಇಡಿ) ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಈ ಆರೋಪಗಳ ಬೆನ್ನಲ್ಲೇ 2022ರ ಜುಲೈನಲ್ಲಿ ಈ ನೀತಿಯನ್ನು ಸರ್ಕಾರ ಹಿಂಪಡೆದಿದೆ.
ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಂಸದ ಸಂಜಯ್ ಸಿಂಗ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಆದರೆ ಇದೀಗ ಈ ಪ್ರಕರಣದಲ್ಲಿ ಬಲವಾದ ಪುರಾವೆಗಳು ಇಲ್ಲ ಎಂದು ಅಭಿಪ್ರಾಯಿಸಿರುವ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ.