Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ವಯೋವೃದ್ಧ ದಂಪತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ.ರಾತ್ರಿ ಮಲಗಿದ್ದವರು ಬೆಳಿಗ್ಗೆ ಹೆಣವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಭೂತನಗುಡಿಯ ನಿವಾಸಿಗಳಾದ ಚಂದ್ರಪ್ಪ (68) ಮತ್ತು ಜಯಮ್ಮ (65) ಸಾವನ್ನಪ್ಪಿದ ದಂಪತಿಗಳು. ಪ್ರತಿದಿನದಂತೆ ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇಂದು ಬೆಳಿಗ್ಗೆ ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿಗಳಿಬ್ಬರೂ ಚಂದ್ರಪ್ಪ ಮನೆಯ ಬೆಡ್ ರೂಂನಲ್ಲಿ ಮಂಚದ ಮೇಲೆ ಹಾಗೂ ಜಯಮ್ಮ ಅವರು ಹಾಲ್ನ ಮಂಚದ ಮೇಲೆ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದವರು.
ಮೃತ ದಂಪತಿಗಳು ಬಿಪಿ ಮತ್ತು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಇವರಿಗೆ ಚಿಕಿತ್ಸೆ ನೀಡಲು ಪ್ರತಿದಿನ ವೈದ್ಯರೊಬ್ಬರು ಮನೆಗೆ ಬರುತ್ತಿದ್ದರು. ಅದರಂತೆ ನಿನ್ನೆ ಮಧ್ಯಾಹ್ನ ವೈದ್ಯರು ಬಂದು ದಂಪತಿಗಳಿಗೆ ಇಂಜೆಕ್ಷನ್ ನೀಡಿ ಹೋಗಿದ್ದರು ಎನ್ನಲಾಗಿದೆ. ಇಂಜೆಕ್ಷನ್ ನೀಡಿದ ನಂತರ ದಂಪತಿಗಳು ಎದ್ದೇಳಲೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ವೈದ್ಯರು ನೀಡಿದರೆನ್ನಲಾದ ಇಂಜೆಕ್ಷನ್ ಸಾವಿಗೆ ಕಾರಣವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಭದ್ರಾವತಿ ಹಳೆನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದುಬರಬೇಕಿದೆ.