Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯ ಆಂಜನೇಯ ದೇಗುಲದಲ್ಲಿ ನಿಗೂಢ ಗೆಜ್ಜೆ ಶಬ್ದ ಮೂರು ದಿನಗಳಿಂದ ನಿರಂತರವಾಗಿ ಕೇಳಿಬರುತ್ತಿದ್ದು, ಈ ಅನಿರೀಕ್ಷಿತ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ.
ಮೂಲಗಳ ಪ್ರಕಾರ, ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ದೇವಾಲಯಕ್ಕೆಂದು ತಂದ ದುರ್ಗಮ್ಮ ಮತ್ತು ಮಾಯಮ್ಮ ದೇವಿ ಮೂರ್ತಿಗಳನ್ನು ಆಂಜನೇಯ ದೇಗುಲದಲ್ಲಿ ತಾತ್ಕಾಲಿಕವಾಗಿ ಇರಿಸಿದ ನಂತರ ಗೆಜ್ಜೆನಾದ ಕೇಳಿಸಲು ಪ್ರಾರಂಭಿಸಿದೆ.ಹೀಗಾಗಿ ಗ್ರಾಮಸ್ಥರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಜಾತ್ರೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಕಳೆದ ಅಮವಾಸ್ಯೆಯಂದು ಕೊರ್ಲಹಳ್ಳಿ ಗ್ರಾಮದ ದುರ್ಗಮ್ಮ (ದುರ್ಗಾದೇವಿ) ದೇವಸ್ಥಾನದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ದುರ್ಗಮ್ಮ ಹಾಗೂ ಮಾಯಮ್ಮ ದೇವಿಯರ ಮೂರ್ತಿಗಳಿಗೆ ಬೆಂಕಿ ತಗುಲಿ ವಿರೂಪಗೊಂಡಿದ್ದವು. ಬೆಂಕಿ ಅವಘಡದ ನಂತರ, ಸುರಕ್ಷತೆ ಹಾಗೂ ಪೂಜಾ ಕ್ರಮ ಮುಂದುವರಿಸುವ ಉದ್ದೇಶದಿಂದ ಗ್ರಾಮಸ್ಥರು ಈ ದೇವಿಯರ ಮೂರ್ತಿಗಳನ್ನು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದರು. ಆದರೆ ಪೂಜೆ ಮಾಡುವುದನ್ನು ನಿಲ್ಲಿಸಿದ್ದರು.
ಯಾವಗ ದೇವಿಯರ ಮೂರ್ತಿಗಳನ್ನು ಆಂಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿದರೂ ಅಲ್ಲಿಂದಲೇ, ದೇವಸ್ಥಾನ ಆವರಣದಿಂದ ಗೆಜ್ಜೆ ಸದ್ದು ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ವಿಶೇಷವಾಗಿ ಮಾಯಮ್ಮ ಮತ್ತು ದುರ್ಗಮ್ಮ ದೇವಿಯರ ಮೂರ್ತಿಗಳನ್ನು ಇಟ್ಟಿರುವ ಜಾಗದ ಬಳಿಯೇ ಈ ನಾದ ಸ್ಪಷ್ಟವಾಗಿ ಕೇಳಿಸುತ್ತಿದೆ ಎಂಬುದು ಅವರ ನಂಬಿಕೆ. ಬೆಂಕಿ ಅವಘಡದ ನಂತರ ದೇವಿಯರಿಗೆ ನಿಯಮಿತ ಪೂಜೆ–ಪುನಸ್ಕಾರ ನಡೆಯದೆ ಇರುವುದೇ ಈ ನಿಗೂಢ ನಾದಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗುತ್ತಿದೆ.
ಫೆಬ್ರವರಿ 2ರಂದು ಜಾತ್ರೆ ಮತ್ತು ವಿಶೇಷ ಪೂಜೆ–ಪುನಸ್ಕಾರ ನಡೆಸಲು ಗ್ರಾಮಸ್ಥರು ಒಟ್ಟಾಗಿ ತೀರ್ಮಾನಿಸಿದ್ದಾರೆ. ದೇವಿಯರ ಪೂಜೆ ಪುನಃ ಆರಂಭವಾದ ಬಳಿಕ ಈ ನಿಗೂಢ ಗೆಜ್ಜೆ ನಾದ ನಿಲ್ಲಬಹುದು ಎಂಬ ಆಶಾಭಾವನೆಯೂ ಗ್ರಾಮಸ್ಥರಲ್ಲಿ ಮೂಡಿದೆ.