**ಶಾಕಿಂಗ್: ಪೊಲೀಸ್ ಜೀಪ್ನಲ್ಲೇ ಬಂದು ಉದ್ಯಮಿಗಳಿಂದ ₹20 ಲಕ್ಷ ದೋಚಿದ ಸಿಐಡಿ ಇನ್ಸ್ಪೆಕ್ಟರ್!**
ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬನೇ ದರೋಡೆ ಗ್ಯಾಂಗ್ ಕಟ್ಟಿಕೊಂಡು ಉದ್ಯಮಿಗಳನ್ನು ಬೆದರಿಸಿ ₹20 ಲಕ್ಷ ಲೂಟಿ ಮಾಡಿದ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕೇರಳ ಮೂಲದ ಕೆಲ ಉದ್ಯಮಿಗಳು ವ್ಯಾಪಾರ ಉದ್ದೇಶಕ್ಕಾಗಿ ಭಾರಿ ಮೊತ್ತದ ನಗದಿನೊಂದಿಗೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ನಲ್ಲಿ ತಂಗಿದ್ದರು. ಅವರ ಬಳಿ ದೊಡ್ಡ ಮೊತ್ತದ ಹಣವಿರುವ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ, ಹಣ ಸುಲಿಗೆ ಮಾಡಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ.
ಆರೋಪದ ಪ್ರಕಾರ, ಮಹೇಶ್ ತನ್ನ ಸಹಚರರಾದ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಅವರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದ. ಘಟನೆಯ ದಿನ ಅಧಿಕೃತ ಸಿಐಡಿ ಜೀಪ್ನಲ್ಲಿ ಹೋಟೆಲ್ಗೆ ಬಂದ ತಂಡ, ತಾವು ಕ್ರೈಂ ವಿಭಾಗದ ಪೊಲೀಸರು ಎಂದು ಹೇಳಿ ನಕಲಿ ಗುರುತಿನ ಚೀಟಿ ತೋರಿಸಿ ಉದ್ಯಮಿಗಳನ್ನು ಬೆದರಿಸಿದೆ.
“ನೀವು ಅಕ್ರಮ ಟ್ರೇಡಿಂಗ್ಗಾಗಿ ಹಣ ತಂದಿದ್ದೀರಿ” ಎಂದು ಬ್ಲ್ಯಾಕ್ಮೇಲ್ ಮಾಡಿದ ಆರೋಪಿಗಳು, ಭಯಗೊಂಡ ಉದ್ಯಮಿಗಳಿಂದ ₹20 ಲಕ್ಷ ಪಡೆದು ಅದೇ ಸಿಐಡಿ ಜೀಪ್ನಲ್ಲಿ ಪರಾರಿಯಾಗಿದ್ದಾರೆ.
ದೂರು ದಾಖಲಾದ ಬಳಿಕ ಹೋಟೆಲ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಮಡಿವಾಳ ಪೊಲೀಸರು, ದರೋಡೆಗೆ ಇಲಾಖೆಯ ಜೀಪ್ ಬಳಸಿರುವುದನ್ನು ಪತ್ತೆಹಚ್ಚಿದರು. ಬಳಿಕ ಕುಪೇಂದ್ರ ಎಂಬ ಆರೋಪಿಯನ್ನು ಬಂಧಿಸಿದಾಗ, ಈ ಪ್ರಕರಣದ ಮಾಸ್ಟರ್ ಮೈಂಡ್ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಎಂಬುದು ಬೆಳಕಿಗೆ ಬಂದಿದೆ.
ಸಹಚರನ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಮಹೇಶ್ ಸೇರಿದಂತೆ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ದರೋಡೆಗೆ ಬಳಸಿದ್ದ ಸಿಐಡಿ ಜೀಪನ್ನು ವಶಪಡಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಳಿಗಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸದ್ಯ ಪ್ರಕರಣ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.