Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಥಾಣೆ: ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಮಾಜಿ ಪ್ರಿಯಕರನ ಕಿರುಕುಳ ತಾಳಲಾರದೆ 21 ವರ್ಷ ಪ್ರಾಯದ ಗಗನಸಖಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಥಾಣೆ ಜಿಲ್ಲೆಯಲ್ಲಿ ಸಂಭವಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಸೆವಾಡಿ ಪೊಲೀಸರು ಮೃತಳ ಮಾಜಿ ಸಂಗಾತಿಯ (23) ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2025ರ ಡಿ. 28ರಂದು ಕಲ್ಯಾಣ್ (ಪೂರ್ವ) ದಲ್ಲಿರುವ ಅನುಸುಯಾ ನಿವಾಸ್‌ನಲ್ಲಿ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ರುಕ್ಮಿಣಿಬಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಅಂತ್ಯಕ್ರಿಯೆಯ ಅನಂತರ ಹೆತ್ತವರು ಮಗಳ ಮೊಬೈಲ್ ಫೋನ್ ಮತ್ತು ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದಾಗ ಆಘಾತಕಾರಿ ವಿಷಯಗಳು ಹೊರಬಂದಿವೆ. ಮೃತ ಯುವತಿ ಮತ್ತು ಆರೋಪಿಯ ನಡುವೆ 2020ರಿಂದ ಪ್ರೇಮ ಸಂಬಂಧವಿತ್ತು. ಆದರೆ ಇತ್ತೀಚೆಗೆ ಆರೋಪಿ ಬೇರೊಬ್ಬ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದಲ್ಲದೆ, ಸಂತ್ರಸ್ತೆಯನ್ನು ಮದುವೆಯಾಗಲು ನಿರಾಕರಿಸಿದ್ದ.
ಅಲ್ಲದೆ ಆಕೆಯ ಖಾಸಗಿ ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಮದುವೆಯ ನೆಪದಲ್ಲಿ ಲಕ್ಷಾಂತರ ರೂ. ಹಣವನ್ನು ಪಡೆದಿದ್ದ ಎಂದು ಆರೋಪಿಸಲಾಗಿದೆ.
ಮೃತದೇಹದ ಮೇಲಿದ್ದ ಗುರುತುಗಳು ಮತ್ತು ಮೊಬೈಲ್ ಚಾಟ್‌ಗಳು ಆಕೆಯ ಮೇಲೆ ದೈಹಿಕ ಹಲ್ಲೆ ನಡೆದಿರುವುದನ್ನೂ ಸೂಚಿಸಿವೆ ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಾಕ್ಷ್ಯಾಧಾರಗಳು ಮತ್ತು ಮೃತಳ ತಾಯಿ ನೀಡಿದ ದೂರಿನ ಮೇರೆಗೆ, ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.