Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮೈಸೂರು: ಏಳು ವರ್ಷ 239 ದಿನ ಮುಖ್ಯಮಂತ್ರಿಯಾಗಿ ಆಳ್ವಿಕೆ ಮಾಡುವ ಮೂಲಕ ರಾಜ್ಯದ ಅತಿ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 2792 ದಿನ ರಾಜ್ಯವಾಳಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದಾರೆ. ಅಷ್ಟೇ ಅಲ್ಲ, 16 ಬಾರಿ ಬಜೆಟ್ ಮಂಡಿಸಿದ ಏಕೈಕ ಸಿಎಂ ಎಂಬ ಖ್ಯಾತಿಗೂ ಸಿದ್ದರಾಮಯ್ಯ ಈ ಬಾರಿ ಪಾತ್ರರಾಗಲಿದ್ದಾರೆ.
2013-18ರ ಅವಧಿಯಲ್ಲಿ 1829 ದಿನ ಸಿಎಂ ಆಗಿದ್ದ ಸಿದ್ದರಾಮಯ್ಯ, ಈಗ ಎರಡನೇ ಅವಧಿಯಲ್ಲಿ ಅರಸು ಅವರ ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಯನ್ನು (7 ವರ್ಷ 239 ದಿನ) ಮುರಿದಿದ್ದಾರೆ.
ಈ ಬಗ್ಗೆ ಸೋಮವಾರ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಂಗಳವಾರ (ಜ.6) ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರ ಮುಖ್ಯಮಂತ್ರಿಯ ಸುದೀರ್ಘ ಅವಧಿಯ ದಾಖಲೆ ಮುರಿಯುವ ಕೆಲಸ ಆಗಲಿದೆ. ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅರಸು ಅವರು ಮೈಸೂರಿನವರು. ನಾನೂ ಮೈಸೂರಿನವನೇ ಆಗಿರುವುದು ಸಂತೋಷದ ಸಂಗತಿ. ತಾಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯೇ ಇರಲಿಲ್ಲ. ಎಂಎಲ್ಎ ಆಗಬೇಕು ಎಂದು ಒಂದು ಸಾರಿ ಅಂದುಕೊಂಡಿದ್ದೆ. ಈಗ ಎಂಟು ಚುನಾವಣೆಗಳನ್ನು ಗೆದ್ದಿದ್ದೇನೆ’ ಎಂದಿದ್ದಾರೆ.
ನೀವು ಹಾಗೂ ದೇವರಾಜ್ ಅರಸ್ ಅವರು ತಳಸಮುದಾಯದವರು. ಈ ವ್ಯವಸ್ಥೆಯಲ್ಲಿ ಈ ಲೆವೆಲ್ಗೆ ಹೋಗುವುದು ದೊಡ್ಡ ಸಾಧನೆ ಅಲ್ಲವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇವರಾಜ ಅರಸು ಅವರು ಸಾಮಾಜಿಕವಾಗಿ ಹಿಂದುಳಿದವರಲ್ಲ. ಸಾಮಾಜಿಕವಾಗಿ ಮುಂದುವರಿದವರು ಅವರು. ಕಡಿಮೆ ಜನಸಂಖ್ಯೆಯ ಜನಪ್ರಿಯ ನಾಯಕರಾಗಿದ್ದರು. ನನಗೂ ಅವರಿಗೂ ಹೋಲಿಕೆ ಇಲ್ಲ. ಸನ್ನಿವೇಶ ಬಂತು ನಾನು ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದೇನೆ. ಜನರ ಆರ್ಶೀವಾದದಿಂದ ಇಲ್ಲಿಯವರೆಗೂ ಬಂದಿದ್ದೇನೆ’ ಎಂದು ಹೇಳಿದ್ದಾರೆ.
‘ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಚುನಾವಣೆಯನ್ನು ಸರ್ವಾನುಮತದಿಂದಲೂ ಆಯ್ಕೆಯಾಗಿದ್ದರು. ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು. ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ.
ಸಂಪುಟ ಪುನಾರಚನೆ:
ಬಜೆಟ್ ತಯಾರಿಯನ್ನು ಸಂಕ್ರಾಂತಿಯ ನಂತರ ಪ್ರಾರಂಭಿಸಲಾಗುವುದು. ಸಂಪುಟ ಪುನರ್ರಚನೆಯ ಬಗ್ಗೆ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಲಾಗುವುದು. ಅವರು ಸಮಯ ನೀಡಿದರೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಬಳ್ಳಾರಿ ಘಟನೆ:
ಬಳ್ಳಾರಿಯಲ್ಲಿ ನಡೆದ ಸಂಘರ್ಷದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿರುವ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸುತ್ತೇನೆ. ಪೊಲೀಸ್ ತನಿಖೆಯ ನಂತರ ಘಟನೆಯ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ: ಜಿಎಸ್ಟಿ ಕಡಿತ, ವಿಬಿ ಜಿ ರಾಮ್ ಜಿ ಯೋಜನೆ ಜಾರಿಯಂತಹ ಕೇಂದ್ರದ ಕ್ರಮಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ರಾಜ್ಯಕ್ಕೆ ಜಿಎಸ್ಟಿಯಿಂದ ವಾರ್ಷಿಕವಾಗಿ 12 ರಿಂದ 15 ಸಾವಿರ ಕೋಟಿ ರೂ.ಗಳು ನಷ್ಟವಾಗುತ್ತಿದ್ದು, ಇದು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಿಂದಲೂ ಮನರೇಗಾ ಯೋಜನೆಗೆ ಸಂಪೂರ್ಣವಾಗಿ ಕೇಂದ್ರವೇ ಅನುದಾನ ನೀಡುತ್ತಿತ್ತು. ಆದರೆ, ಈಗ ಈ ಯೋಜನೆಯನ್ನು ರದ್ದುಪಡಿಸಿದ್ದು, ಇದರಿಂದ ಕಾರ್ಮಿಕರು, ಸಣ್ಣ ರೈತರು, ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರಿಗೆ ನೀಡಲಾಗುತ್ತಿದ್ದ ಕೆಲಸದ ದಿನಗಳು ಕಡಿಮೆಯಾಗಲಿವೆ. ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಅಸಾಂವಿಧಾನಿಕ ಕ್ರಮ. ಈ ಕಾಯ್ದೆಯಂತೆ ಕಾಮಗಾರಿಗಳಿಗೆ ಕೇಂದ್ರ ಮತ್ತು ರಾಜ್ಯ 60:40 ರಷ್ಟು ಅನುದಾನವನ್ನು ನೀಡಬೇಕಾಗಿದೆ. ಇದರಿಂದ ರಾಜ್ಯಸರ್ಕಾರದ ಮೇಲೆ ಸುಮಾರು 3000 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದಿದ್ದಾರೆ.
ಹುಲಿ ಸೆರೆಗೆ ಸೂಚನೆ:
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನಾಳೆ ಅರಣ್ಯ ಇಲಾಖೆಯೊಂದಿಗೆ ಸಭೆ ನಿಗದಿಯಾಗಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಅರಣ್ಯಗಳಿಂದ ಜನರ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ. ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದ್ದು, ಸೆರೆಹಿಡಿದ ಹುಲಿಗಳನ್ನು ಮತ್ತೊಂದು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಬಲೂನ್ ಸ್ಫೋಟ- ಪರಿಹಾರ: ಮೈಸೂರಿನ ಅರಮನೆಯ ಮುಂಭಾಗದಲ್ಲಿ ಬಲೂನ್ ಸ್ಫೋಟದಲ್ಲಿ ಮೃತರಾದ ಮಹಿಳೆಯರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.