Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಅರಣ್ಯ ಸಂಪತ್ತಿನ ಖನಿಜವಾಗಿತ್ತು. ಇದೀಗ ಚಿನ್ನದ ನಿಕ್ಷೇಪವನ್ನು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಪತ್ತೆ ಮಾಡಿದೆ. ದೇಶದಲ್ಲಿ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿರುವ ಮಧ್ಯೆಯೇ ಚಿನ್ನದ ಗಣಿ ಪತ್ತೆಯಾಗಿದೆ.
ಭಾರತದ ಭೌಗೋಳಿಕ ನಕ್ಷೆಯಲ್ಲಿ ಮಿನರಲ್ ಅಂಶಗಳನ್ನು ಪತ್ತೆ ಮಾಡುವ ವೇಳೆ ಮಿನರಲೈಸೇಷನ್ ಮ್ಯಾಪ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ, ಅಜ್ಜೀಪುರ, ದೊಡ್ಡಾಲತ್ತೂರು ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಹೀಗಾಗಿ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಅಧಿಕಾರಿಗಳು ಖದ್ದು ಸ್ಥಳ ಪರಿಶೀಲನೆ ಮಾಡಿ, ಚಿನ್ನದ ನಿಕ್ಷೇಪದ ಬಗ್ಗೆ ವೈಜ್ಞಾನಿಕ ಉಪಕರಣಗಳ ಮೂಲಕ ಶೋಧ ನಡೆಸಿದ್ದಾರೆ.
ಪ್ರಾಥಮಿಕ ಹಂತದ ಅನ್ವೇಷಣೆಯಲ್ಲಿ ಚಿನ್ನದ ನಿಕ್ಷೇಪ ಹಾಗು ಚಿನ್ನಕ್ಕೆ ಸಂಬಂಧಿಸಿದಂತೆ ತಾಮ್ರ, ಬೆಳ್ಳಿ ಖನಿಜಾಂಶಗಳು ಸಹ ಪತ್ತೆಯಾಗಿವೆ. ಮೂರು ಹಂತಗಳಲ್ಲಿ ಶೋಧ ಕಾರ್ಯ ನಡೆಯಲಿದ್ದು, ಚಿನ್ನದ ನಿಕ್ಷೇಪವಿರುವ ಕೋರ್ ಏರಿಯಾದಲ್ಲಿ ಎಷ್ಟು ಟನ್ ಚಿನ್ನ ಸಿಗುತ್ತದೆ ಹಾಗೂ ಯಾವ ಗ್ರೇಡ್ ಚಿನ್ನ ದೊರೆಯುತ್ತದೆ ಎಂಬುದು ಖಚಿತವಾಗಬೇಕಿದೆ.
ಜಿಎಸ್ಐ ಅಧಿಕಾರಿಗಳು ಹಾಗೂ ಭೂವಿಜ್ಞಾನಿಗಳ ತಂಡ ರಾಜ್ಯದಾದ್ಯಂತ ಜಿಯಾಲಜಿಕಲ್ ಮ್ಯಾಪಿಂಗ್ ಹಾಗೂ ಭೂಮಿಯೊಳಗೆ ಖನಿಜಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಅದರಂತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ, ಕೌದಳ್ಳಿ, ದೊಡ್ಡ ಆಲತ್ತೂರು ಗ್ರಾಮಗಳಲ್ಲಿ ಪ್ರಾಥಮಿಕ ಹಂತದ ಜಿ-ಫೋರ್ ಸರ್ವೆಯಲ್ಲಿ ಚಿನ್ನದ ಲಭ್ಯತೆಯನ್ನು ಗುರುತಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ತಿಳಿಸಿದರು.6 ತಿಂಗಳು ಸಂಶೋಧನೆ ನಡೆಯಲಿದೆ. ಆ ಅವಧಿಯಲ್ಲಿ ಚಿನ್ನದ ಲಭ್ಯತೆ ಖಚಿತವಾದರೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ. ಚಿನ್ನವಲ್ಲದೆ, ಬೆಳ್ಳಿ, ತಾಮ್ರ ಸಹಿತ ವಿರಳ ಲೋಹಗಳ ನಿಕ್ಷೇಪ ಪತ್ತೆಯೂ ನಡೆದಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರದ ಎನ್ಎಂಇಟಿ ಜಂಟಿ ಪ್ರಾಯೋಜಕತ್ವದಲ್ಲಿ ಸರ್ವೆ ನಡೆಯುತ್ತಿದೆ. ಈ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲು ಕನಿಷ್ಟ ಎರಡು ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದರು.