Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹರಿಯಾಣ: ಗುರುಗ್ರಾಮದ ಭೌರಾ ಖುರ್ದ್ ಎಂಬ ಊರಲ್ಲಿ ತಂಗಿಯೊಬ್ಬರು ತನ್ನ ಮಗನ ಮದುವೆಗೆ ಅಣ್ಣನನ್ನು ಆಹ್ವಾನಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದಾರೆ. ವಿವಾಹಪೂರ್ವ ಆಚರಣೆಯಲ್ಲಿ ಸಹೋದರಿ ತನ್ನ ಸಹೋದರನನ್ನು ಮದುವೆಗೆ ಆಹ್ವಾನಿಸಲು ಆತನ ಮನೆಗೆ ಭೇಟಿ ನೀಡುವುದು ವಾಡಿಕೆ. ನಂತರ ಆ ಸಹೋದರ ಸಹೋದರಿಯ ಮನೆಗೆ ಭೇಟಿ ಬಂದು ಸ್ಥಳೀಯ ಆಚರಣೆಯಲ್ಲಿ ಕರೆಯುವ ‘ಭಾತ್’ ರೂಪದಲ್ಲಿ ಉಡುಗೊರೆ ನೀಡಬೇಕು.
ವರ ರೋಹಿತ್ ದಹಿಯಾ ಅವರ ತಾಯಿ ಪಿಂಕಿ ಎಂಬಾಕೆ ತನ್ನ ಸಹೋದರ ಪ್ರದೀಪ್ ಪನ್ವರ್ ಅವರನ್ನು ಮದುವೆಗೆ ಆಹ್ವಾನಿಸಲು ಹೆಲಿಕಾಪ್ಟರ್‌ನಲ್ಲಿ ತವರಿಗೆ ಬಂದಿದ್ದಾರೆ. ಪಿಂಕಿಯ ತವರು ಮನೆ ಮತ್ತು ಅತ್ತೆಯ ಮನೆಯ ನಡುವಿನ ಅಂತರ ಕೇವಲ 25 ಕಿಲೋಮೀಟರ್. ಆದರೂ, “ಈ ಗಳಿಗೆಯನ್ನು ವಿಶೇಷ ಮತ್ತು ಸ್ಮರಣೀಯವಾಗಿಸಲು ನಾನು ಬಯಸಿದ್ದೆ. ಆದ್ದರಿಂದ ಹೆಲಿಕಾಪ್ಟರ್ನಲ್ಲಿ ಬಂದೆ” ಎಂದು ಪಿಂಕಿ ಅವರು ಹೇಳಿದ್ದಾರೆ.
ಹೆಲಿಕಾಪ್ಟರ್ ನೋಡಲು ಮುಗಿಬಿದ್ದ ಜನ: ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಹೋದರಿ ಮತ್ತು ಭಾವನಿಗೆ ಸಹೋದರ ಆತ್ಮೀಯ ಸ್ವಾಗತ ನೀಡಿದರು. ಹೂವಿನ ಹಾರ ಹಾಕಿ, ದಳಗಳನ್ನು ಸುರಿದು ಬರಮಾಡಿಕೊಂಡರು. ತಮ್ಮ ಊರಿನಲ್ಲಿ ಹೆಲಿಕಾಪ್ಟರ್ ಬಂದಿಳಿದ ಬಳಿಕ ಜನರು ಅದನ್ನು ನೋಡಲು ಮುಗಿಬಿದ್ದಿದ್ದರು. ಊರ ಹೊರಗಿನ ಜಾಗದಲ್ಲಿ ನಿಗದಿತ ಸ್ಥಳದಲ್ಲಿ ಹೆಲಿಕಾಪ್ಟರ್ ಬಂದಿಳಿಯಿತು. ವಿಶೇಷವೆಂದರೆ, ಸಹೋದರಿಯೊಬ್ಬರು ತನ್ನ ಸಹೋದರನನ್ನು ‘ಭಾತ್’ (ಮದುವೆ ಹಬ್ಬ)ಗೆ ಆಹ್ವಾನಿಸಲು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದು ಇದೇ ಮೊದಲು.
ಡಿಸೆಂಬರ್ 11 ರಂದು ವಿವಾಹ: ವರದಿಗಳ ಪ್ರಕಾರ, ಪಿಂಕಿ ಅವರ ಪುತ್ರನ ವಿವಾಹವು ಝಾರ್ಸಾ 360 ಅಧ್ಯಕ್ಷ ಮಹೇಂದ್ರ ಸಿಂಗ್ ಥಕ್ರನ್ ಅವರ ಮೊಮ್ಮಗಳ ಜೊತೆ ಡಿಸೆಂಬರ್ 11 ರಂದು ನಡೆಯಲಿದೆ. ಗ್ರಾಮಕ್ಕೆ ಹೆಲಿಕಾಪ್ಟರ್ ಬಂದ ಹಿನ್ನೆಲೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಅಗ್ನಿಶಾಮಕ ದಳದ ವಾಹನವೂ ಇತ್ತು.