Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ನಮ್ಮಲ್ಲಿ ಸೋಮಾರಿಗಳನ್ನು ಕತ್ತೆಗಳಿಗೆ ಹೋಲಿಸುತ್ತೇವೆ. ಆದರೆ ಸ್ವತಃ ನಮಗೇ ಕತ್ತೆಗಳ ಪ್ರಯೋಜನಗಳು ಸರಿಯಾಗಿ ತಿಳಿದಿರುವುದಿಲ್ಲ. ಸ್ವಲ್ಪ ಹಿಂದಿನ ದಶಕದಲ್ಲಿ ಕೇವಲ ಬಟ್ಟೆ ಒಗೆಯುವ ಅಗಸನ ಬಳಿ ಮಾತ್ರ ಕತ್ತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಕತ್ತೆಗಳ ಸಾಕಾಣಿಕೆ ಒಂದು ವ್ಯವಹಾರವಾಗಿ ಬದಲಾಗುತ್ತಿದೆ ಮತ್ತು ಜನರ ಜೀವನ ನಿರ್ವಹಣೆಗೆ ಸಹಾಯ ಆಗುತ್ತಿವೆ.ಹೌದು ಕತ್ತೆಯ ಹಾಲಿನಲ್ಲಿ ಸಾಕಷ್ಟು ಔಷದೀಯ ಗುಣಗಳು ಇವೆ ಎಂಬುದು ಈಗಾಗಲೇ ಸಾಬೀತಾಗಿದೆ. ಅದರ ಬಳಿಕ ಕತ್ತೆ ಹಾಲಿಗೆ ಡಿಮ್ಯಾಂಡ್ ಬೇರೆಯದ್ದೆ ಆದ ಹಂತವನ್ನು ತಲುಪಿದೆ. ಹೀಗೆ ಕತ್ತೆಗಳ ಹಿಂದಿ ಬಿದ್ದು ತುಮಕೂರಿನ ಮಧುಗಿರಿಯ ಮಹಿಳೆಯೊಬ್ಬರು ಕತ್ತೆ ಹಾಲನ್ನೇ ಪ್ರಮುಖವಾಗಿರಿಸಿಕೊಂಡು ಉದ್ಯಮ ಆರಂಭಿಸಿದ್ದು, ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷದ ಕೃಷಿಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಜಿಕೆವಿಕೆ ಆವರಣದಲ್ಲಿ ಕೃಷಿ ಲೋಕವೇ ಅನಾವರಣಗೊಂಡಿದ್ದು, ಈ ಬಾರಿಯ ಕೃಷಿಮೇಳದಲ್ಲಿ 700 ವಿವಿಧ ಮಳಿಗೆಗಳು ತೆರೆದುಕೊಂಡಿವೆ. ಬಗೆ ಬಗೆಯ ಕೃಷಿ ಉಪಕರಣಗಳು, ವಿವಿಧ ಬಗೆಯ ಸಸ್ಯ ತಳಿಗಳು ಜನರ ಗಮನಸೆಳೆಯುತ್ತಿದ್ರೆ, ಕೀಟ ವಿಸ್ಮಯ, ಮತ್ಸ್ಯಲೋಕ ಹಾಗೂ ಬಗೆ ಬಗೆಯ ಕೃಷಿ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿದೆ. ಹಾಗೆಯೇ ಇಲ್ಲಿ ಗಮನ ಸೆಳೆದ ಮತ್ತೊಂದು ವಿಚಾರ ಎಂದರೆ ಕತ್ತೆ ಹಾಲಿನಿಂದ ತಯಾರಿಸಿದ ಉತ್ಪನ್ನಗಳು.
ತುಮಕೂರಿನ ಮೇಘ ಎಂಬ ಮಹಿಳಾ ಉದ್ಯಮಿಯೊಬ್ಬರು ಕತ್ತೆ ಹಾಲಿನಿಂದ ತಯಾರಿಸಿದ ಹಲವು ಉತ್ಪನ್ನಗಳನ್ನು ಈ ಕೃಷಿ ಮೇಳದಲ್ಲಿ ಪರಿಚಯಿಸಿದರು. ತುಮಕೂರಿನ ಮಧುಗಿರಿಯಲ್ಲಿ ಕ್ಷೀರ ಸಾಗರ ಡಾಂಕಿ ಫಾರಂ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕತ್ತೆ ಹಾಲಿನಿಂದ ತಮ್ಮ ಸಂಸ್ತೆ ತಯಾರಿಸಿದ ಹಲವು ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಜೊತೆಗೆ ಅವರು ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿದ್ದಾರೆ. ಇವರ ಬಳಿ ಕತ್ತೆ ಹಾಲಿನಿಂದ ತಯಾರಿಸಿದ ಸ್ನಾನದ ಸೋಪ್, ಕ್ರೀಮ್, ಆಯಿಲ್ ಸೇರಿದಂತೆ ಹಲವು ಉತ್ಪನ್ನಗಳಿವೆ.
ಕತ್ತೆ ಹಾಲಿನಿಂದ ರೆಡಿಯಾದ ಸ್ನಾನದ ಸೋಪಿನಿಂದ ಚರ್ಮ ಮೃದುವಾಗುತ್ತದೆ. ಅದರಲ್ಲಿ ವಿಟಾಮಿನ್ ಎ, ಡಿ, ಇ ಇದೆ. ಇವೆಲ್ಲವೂ ಚರ್ಮಕ್ಕೆ ಆರೋಗ್ಯಕ್ಕೆ ಸಹಾಯಕವಾಗುವ ವಿಟಾಮಿನ್ಗಳಾಗಿದ್ದು, ಇದರಿಂದ ಚರ್ಮ ಮೃದುವಾಗುತ್ತದೆ. ಚರ್ಮದಲ್ಲಿ ತುರಿಕೆ ಇದ್ದರೆ ಕಡಿಮೆ ಆಗುತ್ತದೆ. ಅದರ ನೈಸರ್ಗಿಕ ಎಣ್ಣೆ ಬಲಸುವುದರಿಂದ ಚರ್ಮಕ್ಕೆ ಹೊಳಪು ಬರುವುದು. ಸಂಪೂರ್ಣವಾಗಿ ಚರ್ಮ ಗೌರವರ್ಣಕ್ಕೆ ತಿರುಗುತ್ತದೆ ಎಂದು ಹೇಳುತ್ತಾರೆ ಮೇಘಾ. ಒಮ್ಮೆ ಈ ಉತ್ಪನ್ನವನ್ನು ಬಳಸಿದವರು ಮತ್ತೆ ಮತ್ತೆ ಆರ್ಡರ್ ಮಾಡುತ್ತಾರೆ. ಕಳೆದ ವರ್ಷ ಕೃಷಿ ಮೇಳದಲ್ಲಿ ಇದನ್ನು ಪರಿಚಯಿಸಲಾಯ್ತು. ಈ ವರ್ಷದ ಕೃಷಿ ಮೇಳದ ಸಮಯಕ್ಕೆ ಒಂದು ವರ್ಷ ಆಯ್ತು ಎಂದು ಅವರು ಹೇಳಿದ್ದಾರೆ. ಜನರಿಂದ ಈ ಉತ್ಪನ್ನಗಳಿಗೆ ಸ್ಪಂದನೆ ಚೆನ್ನಾಗಿದೆ, ಸುಮಾರು 40 ಕತ್ತೆಗಳನ್ನು ಈ ಉತ್ಪನ್ನಗಳಿಗಾಗಿ ಸಾಕಾಲಾಗುತ್ತಿದೆ ಎಂದು ಅವರು ಹೇಳಿದರು.