Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿ 30 ರೂ.ಗಳಿಂದ ಪ್ರಾರಂಭವಾಗುತ್ತದೆ. ಆದರೆ ಎಂದಾದರೂ ಸಾವಿರಾರೂ ರೂಪಾಯಿ ಖರ್ಚು ಮಾಡಿ ಅಕ್ಕಿ ಖರೀದಿಸಿದ್ದೀರಾ? ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ಅಕ್ಕಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಕಿನ್ಮೆಮೈ ಅಕ್ಕಿಯನ್ನು ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂದು ಪರಿಗಣಿಸಲಾಗಿದೆ. ಅದರ ಪ್ರೀಮಿಯಂ ಗುಣಮಟ್ಟ ಮತ್ತು ವಿಶಿಷ್ಟ ಉತ್ಪಾದನಾ ತಂತ್ರದಿಂದಲೇ ಹೆಸರುವಾಸಿಯಾಗಿದೆ. ನೀವು ಒಂದು ಕೆಜಿ ಅಕ್ಕಿ ಖರೀದಿಸಲು ಸಾವಿರಾರೂ ರೂ. ಖರ್ಚು ಮಾಡಬೇಕು.
ಜಪಾನ್’ನಲ್ಲಿರುವ ಟೊಯೊ ಎಂಬ ಅಕ್ಕಿ ಕಂಪನಿಯು ಕಿನ್ಮೆಮೈ ಎಂಬ ಅಕ್ಕಿಯನ್ನು ತಯಾರಿಸುತ್ತದೆ. ಈ ಅಕ್ಕಿಯನ್ನು ವಿಶ್ವದಲ್ಲೇ ಅತ್ಯಂತ ದುಬಾರಿ ಎಂದು ಪರಿಗಣಿಸಲಾಗಿದೆ. ಕಂಪನಿಯು ಈ ಅಕ್ಕಿಗೆ ಪೇಟೆಂಟ್ ಸಹ ಪಡೆದುಕೊಂಡಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಈ ಅಕ್ಕಿ ಅದರ ಗುಣಮಟ್ಟಕ್ಕೆ ಬಹಳ ಪ್ರಸಿದ್ಧವಾಗಿದೆ. ಅಲ್ಲದೆ, ಈ ಕಿನ್ಮೆಮೈ ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುವುದರಿಂದ ಇದು ತುಂಬಾ ವಿಶೇಷವಾಗಿದೆ.
ಈ ಕಿನ್ಮೆಮೈ ಅಕ್ಕಿ ಸಾಮಾನ್ಯ ಅಕ್ಕಿಗಿಂತ 1.8 ಪಟ್ಟು ಹೆಚ್ಚು ಫೈಬರ್ ಹೊಂದಿರುತ್ತದೆ ಮತ್ತು ಇದು 7 ಪಟ್ಟು ಹೆಚ್ಚು ವಿಟಮಿನ್ ಬಿ 1 ಹೊಂದಿರುತ್ತದೆ. ಅದಕ್ಕಾಗಿಯೇ ಈ ಅಕ್ಕಿಯನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಖರೀದಿಸಿ ಬಳಸುತ್ತಾರೆ.
ಇದಲ್ಲದೆ, ಈ ಅಕ್ಕಿಯಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದು ಹೇಳಲಾಗುತ್ತದೆ. ಈ ಅಕ್ಕಿಯ ಒಂದು ಕಿಲೋ ಬೆಲೆ 12,500 ರೂ. ಈ ಅಕ್ಕಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿಯೂ ಸ್ಥಾನ ಪಡೆದಿದೆ. ಕಿನ್ಮೆಮೈ ಅಕ್ಕಿ ಒಂದೇ ವಿಧವಲ್ಲ. ಇದು ಜಪಾನ್’ನಾದ್ಯಂತ ಬೆಳೆಯುವ ಗುನ್ಮಾ, ಗಿಫು, ಕುಮಾಮೊಟೊ, ನಾಗಾನೊ ಮತ್ತು ನೀಗಾಟಾ ಪ್ರದೇಶಗಳಿಂದ ಬರುವ ಅಕ್ಕಿಯ ಮಿಶ್ರಣವಾಗಿದೆ ಎಂದು ಹೇಳಲಾಗುತ್ತದೆ.
ಈ ಅಕ್ಕಿ ಎಷ್ಟು ಸ್ವಚ್ಛವಾಗಿದೆಯೆಂದರೆ ಅದನ್ನು ತೊಳೆಯದೆ ಬಳಸಬಹುದು. ಅಕ್ಕಿ ತೊಳೆಯುವುದರಿಂದ ನೀರು ವ್ಯರ್ಥವಾಗುತ್ತದೆ. ಹಾಗಾಗಿ ಖರೀದಿಸಿದ ನಂತರ ಇದನ್ನು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಬಹುದು. ಇದು ಅಮೈನೋ ಆಮ್ಲಗಳು, ಪೋಷಕಾಂಶಗಳು ಮತ್ತು ವಿಟಮಿನ್ ಬಿಯಿಂದ ಸಮೃದ್ಧವಾಗಿದೆ.