Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಅಮರಾವತಿ: ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಕೆ. ಚಿನ್ನ ಅಪ್ಪಣ್ಣ ಅವರ ಖಾತೆಗಳಲ್ಲಿ ಆರ್ಥಿಕ ಅಕ್ರಮ ನಡೆದಿರುವುದನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬಯಲು ಮಾಡಿದೆ.
ಸುಬ್ಬಾರೆಡ್ಡಿಯವರ ಪಿಎ ಮೂಲಕ ಕಲಬೆರಕೆ ತುಪ್ಪಕ್ಕೆ ಕೆಜಿ 25ರೂ.ನಂತೆ ಲಂಚವನ್ನು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವೈವಿ ಸುಬ್ಬಾರೆಡ್ಡಿ ಆಪ್ತರಿಂದ ಎಸ್ಐಟಿ 4.69 ಕೋಟಿ ವಶಕ್ಕೆ ಪಡೆದಿದೆ.
ಸಿಎಫ್‌ಟಿಆರ್‌ಐ ಮೈಸೂರಿನ ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ತುಪ್ಪ ನಕಲಿ ಎಂದು ಸಾಬೀತಾಗಿದ್ದರೂ ಸುಬ್ಬಾರೆಡ್ಡಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಪೂರೈಕೆದಾರರು 2024ರವರೆಗೆ ತುಪ್ಪ ಸರಬರಾಜು ಮಾಡಿದ್ದು, ಇದರಲ್ಲಿ ಭ್ರಷ್ಟಾಚಾರ ದೊಡ್ಡ ಮಟ್ಟದಲ್ಲಿ ನಡೆದಿರುವುದು ಬಯಲಾಗಿದೆ.
2019 ಮತ್ತು 2024ರ ನಡುವೆ, ಚಿನ್ನ ಅಪ್ಪಣ್ಣ ಅವರ ಆದಾಯ ಕೇವಲ ₹65 ಲಕ್ಷವಿತ್ತು. ಆದರೆ, ದೆಹಲಿಯ ಎಪಿ ಭವನದಲ್ಲಿರುವ ಅವರ ಯೂನಿಯನ್ ಬ್ಯಾಂಕ್ ಖಾತೆಗೆ 4.69 ಕೋಟಿ ರೂಪಾಯಿ ಠೇವಣಿ ಇಡಲಾಗಿತ್ತು. ಇದರಲ್ಲಿ ₹4.65 ಕೋಟಿಯನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದ್ದು, ಬಾಕಿ 4.98 ಲಕ್ಷ ಮಾತ್ರ ಉಳಿದಿದೆ.
ಎಸ್ಐಟಿ ತನಿಖೆಯ ಪ್ರಕಾರ, ಕಲಬೆರಕೆ ತುಪ್ಪ ಪೂರೈಕೆದಾರರಿಂದ ಈ ಹಣ ಲಂಚ ರೂಪವಾಗಿ ಪಡೆಯಲಾಗಿದೆ. ಇದು ಅಂತಿಮವಾಗಿ ಕಡೆಯ ಫಲಾನುಭವಿಗೆ ತಲುಪಿದೆ. ಎಸ್‌ಬಿಐನ ವಿಜಯವಾಡ ಶಾಖೆಯಲ್ಲಿರುವ ಬಾವಿರೆಡ್ಡಿ ಶ್ರೀದೇವಿ ಅವರಿಗೆ ಸೇರಿದ ಮತ್ತೊಂದು ಖಾತೆಯಲ್ಲಿ ಅನುಮಾನಾಸ್ಪದ ವಹಿವಾಟುಗಳು ಪತ್ತೆಯಾಗಿವೆ.
2021 ಮತ್ತು 2024ರ ನಡುವೆ ಚಿನ್ನ ಅಪ್ಪಣ್ಣ ಅವರು ತಗರಪುವಲಸದಲ್ಲಿ ಐದು ಪ್ಲಾಟ್‌ಗಳು, ಲಂಕಾಲಪಲೆಂನಲ್ಲಿ ಎಂಟು ಪ್ಲಾಟ್‌ಗಳು ಮತ್ತು ಋಷಿಕೊಂಡದಲ್ಲಿ ಒಂದು ಫ್ಲಾಟ್ ಅನ್ನು ಖರೀದಿಸಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದ್ದು, ಈ ಖರೀದಿಗಳಿಗೆ ಬಳಸಲಾದ ಹಣದ ಮೂಲವನ್ನು ಎಸ್‌ಐಟಿ ಈಗ ಪತ್ತೆಹಚ್ಚುತ್ತಿದೆ
ತನಿಖೆಯಲ್ಲಿ ಹೇಗೆ ತಾಳೆ ಎಣ್ಣೆ (ಪಾಮ್ ಆಯಿಲ್), ಪಾಮ್ ಕರ್ನಲ್ ಎಣ್ಣೆ ಮತ್ತು ಬೀಟಾ ಕ್ಯಾರೋಟಿನ್ ನಿಂದ ತಯಾರಿಸಿದ ನಕಲಿ ತುಪ್ಪವನ್ನು ಟಿಟಿಡಿಗೆ ಶುದ್ಧ ತುಪ್ಪವಾಗಿ ಹೇಗೆ ಪೂರೈಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿದೆ.
ಭೋಲೆಬಾಬಾ ಡೈರಿ ಮಿಲ್ಕ್ ಪ್ರೈವೇಟ್ ಲಿಮಿಟೆಡ್ 251.53 ಕೋಟಿ ಮೌಲ್ಯದ 68.17 ಲಕ್ಷ ಕೆಜಿ ಕಲಬೆರಕೆ ತುಪ್ಪವನ್ನು ಉತ್ಪಾದಿಸಿದೆ. ವೈಷ್ಣವಿ ಡೈರಿ ಸ್ಪೆಷಾಲಿಟೀಸ್ ಮೂಲಕ 137 ಕೋಟಿ ರೂ. ಮೌಲ್ಯದ 37.38 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಪೂರೈಸಿದೆ.
ತನಿಖೆಯಲ್ಲಿ ಬಯಲಾಗಿರುವ ಈ ಹಗರಣವು ಭಕ್ತರಲ್ಲಿ ಆಘಾತ ಮತ್ತು ಅವರ ಭಾವನೆಗಳಿಗೆ ಧಕ್ಕೆ ತಂದಿದೆ.
Embarrassed CM ನನ್ ಹೆಂಡ್ತಿಗೂ ಫ್ರೀ ರೇವಣ್ಣ ಹೆಂಡ್ತಿಗೂ ಫ್ರೀ ಎಂದು ಮುಜುಗರಕ್ಕೀಡಾದ ಸಿಎಂ!
Two students drown in Harangi ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರ ಸಾವು