newsics.com
ಮಂಡ್ಯ: ಆಸ್ತಿ ಆಸೆಯಿಂದ ಇಲ್ಲೊಬ್ಬ ಕಿರಾತಕ ಮಗ ಬ್ಲಾಕ್‌ಮೇಲ್ ಮಾಡಿ ತಂದೆಯಿಂದಲೇ ಹಣ, ಆಸ್ತಿ ಪೀಕಿಸಲು ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಮಗ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಆತನ ಸ್ವಂತ ಮಗನಿಂದಲೇ ಬ್ಲಾಕ್‌ಮೇಲ್‌ಗೆ ಒಳಗಾದ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾದ ಸತೀಶ್, ‘ರಾಣಿ ಐಶ್ವರ್ಯ ಡೆವಲರ್ಸ್’ ಹೆಸರಿನಲ್ಲಿ ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ತಮ್ಮ ಬ್ಯುಸಿನೆಸ್ ಮೂಲಕ ಚಿರಪರಿಚಿತರು. ಇನ್ನು ಈತನಿಗೆ 25 ವರ್ಷದ ಮಗನೂ ಇದ್ದಾನೆ. ಈತನ ಹೆಸರು ಪ್ರಣವ್. ಆತ ತಂದೆಯ ಕೋಟ್ಯಾಂತರ ರೂಪಾಯಿಗಳ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಕೆಲವು ವಿರೋಧಿಗಳ ಜೊತೆ ಸೇರಿಕೊಂಡು ಒಂದು ಖತರ್ನಾಕ್ ಪ್ಲಾನ್ ಮಾಡಿದ್ದಾನೆ.
ತಂದೆಯ ಭಾವಚಿತ್ರಕ್ಕೆ ಅಶ್ಲೀಲ ಚಿತ್ರಗಳನ್ನು ಮತ್ತು ವಾಯ್ಸ್ ರೆಕಾರ್ಡಿಂಗ್‌ಗಳನ್ನು ಎಡಿಟ್ ಮಾಡಿ, ಅವುಗಳನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದಾನೆ . ಈ ರೀತಿಯ ಕೃತ್ಯದ ಮೂಲಕ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿ, ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದರ ಜೊತೆಗೆ, ಹಣಕ್ಕಾಗಿ ನಿರಂತರವಾಗಿ ಬೇಡಿಕೆ ಒಡ್ಡಿದ್ದಾನೆ ಎಂದು ಆರೋಪವಿದೆ. ಆದರೆ, ತಂದೆ ಸತೀಶ್ ಈ ಬೇಡಿಕೆಗೆ ಸ್ಪಂದಿಸದಿದ್ದಾಗ, ಪ್ರಣವ್ ಮತ್ತು ಆತನ ಸಹಚರರು ಈ ಬ್ಲಾಕ್‌ಮೇಲ್ ಮಾಡಲು ಮುಂದಾಗಿದ್ದಾರೆ.
ತನ್ನ ಮಗನ ಕೃತ್ಯಕ್ಕೆ ರೊಚ್ಚಿಗೆದ್ದ ತಂದೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸರು ಆರೋಪಿಗಳಾದ ಪ್ರಣವ್, ಮಹೇಶ್, ಈಶ್ವರ್, ಮತ್ತು ಪ್ರೀತಮ್‌ರನ್ನು ಬಂಧಿಸಿದ್ದಾರೆ.