newsics.com
ನವದೆಹಲಿ: ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ – 2025’ ಲೋಕಸಭೆಯಲ್ಲಿ ಬುಧವಾರ ಅಂಗೀಕಾರವಾಯಿತು.
ತಂತ್ರಜ್ಞಾನ ದುರುಪಯೋಗದ ಸಂಭಾವ್ಯ ಹಾನಿಗಳಿಂದ ಸಮಾಜವನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ. ಹೀಗಾಗಿ ಸರ್ಕಾರವು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ – 2025 ಜಾರಿಗೆ ಮುಂದಾಗಿದೆ.
ಹಣವಿಟ್ಟು ಆಡುವ ಎಲ್ಲಾ ಆನ್ಲೈನ್ ಗೇಮ್ ಗಳು ಇನ್ನೂ ಕಡ್ಡಾಯ ನಿಷೇಧವಾಗಿದ್ದು, ಉಲ್ಲಂಘಿಸಿದರೆ ಮೂರು ವರ್ಷ ಜೈಲು ಶಿಕ್ಷೆ, ಒಂದು ಕೋಟಿ ರೂ. ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ.
ಈ ಮಸೂದೆಯು ಸುರಕ್ಷಿತ ಮತ್ತು ಸಕಾರಾತ್ಮಕ ಆನ್‌ಲೈನ್ ಗೇಮಿಂಗ್ ಮೂಲಕ ನಾವೀನ್ಯತೆ ಹಾಗೂ ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಜತೆಗೆ ಆರ್ಥಿಕ ನಷ್ಟ ಉಂಟು ಮಾಡುವ ಆನ್‌ಲೈನ್ ಆಟಗಳನ್ನು ನಿಷೇಧಿಸುತ್ತದೆ.
ಇ-ಸ್ಪೋರ್ಟ್ಸ್ ಮತ್ತು ಆನ್‌ಲೈನ್ ಸಾಮಾಜಿಕ ಆಟಗಳನ್ನು ಮಸೂದೆ ಪ್ರೋತ್ಸಾಹಿಸುತ್ತದೆ. ಆದರೆ ಆರ್ಥಿಕ ನಷ್ಟ ಉಂಟು ಮಾಡುವ ಆನ್‌ಲೈನ್ ಮನಿ ಗೇಮಿಂಗ್ ಸೇವೆಗಳು, ಜಾಹೀರಾತುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ನಿಷೇಧಿಸುತ್ತದೆ.
ಈ ಮಸೂದೆಯು ಆನ್‌ಲೈನ್ ಫ್ಯಾಂಟಸಿ ಸ್ಪೋರ್ಟ್ಸ್‌ನಿಂದ ಆನ್‌ಲೈನ್ ಜೂಜಾಟ (ಪೋಕರ್, ರಮ್ಮಿ) ಮತ್ತು ಆನ್‌ಲೈನ್ ಲಾಟರಿಗಳವರೆಗೆ ಎಲ್ಲಾ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟ (ಸಟ್ಟಾ ಮತ್ತು ಜುವಾ) ಆಟಗಳನ್ನು ಸಹ ನಿಷೇಧಿಸುತ್ತದೆ. ಇದು ಯುವಕರನ್ನು ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ಆ್ಯಪ್ಗಳಿಂದ ರಕ್ಷಿಸುತ್ತದೆ.
ಇಂತಹ ಆಟಗಳನ್ನು ನಿಷೇಧಿಸುವ ಮೂಲಕ ಆನ್‌ಲೈನ್ ಮನಿ ಗೇಮಿಂಗ್ ವ್ಯಸನ, ಆರ್ಥಿಕ ನಷ್ಟಗಳು ಮತ್ತು ಆತ್ಮಹತ್ಯೆಗಳನ್ನು ತಡೆಯಬಹುದು ಎಂದು ಸರ್ಕಾರ ಯೋಚಿಸಿದೆ. ಆನ್‌ಲೈನ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚಾಗಿ ಆರ್ಥಿಕ ವಂಚನೆ, ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂದೇಶ ಕಳುಹಿಸಲು ಬಳಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಶಾಲೆಯಲ್ಲೇ 9ನೇ ತರಗತಿ ವಿದ್ಯಾರ್ಥಿಯಿಂದ ಹಿರಿಯ ವಿದ್ಯಾರ್ಥಿಗೆ ಚಾಕು ಇರಿತ – ಚಿಕಿತ್ಸೆ ಫಲಿಸದೇ ಬಾಲಕ ಸಾವು