newsics.com
ಈ ಬಾವಿ ನೀರು ಕುಡಿದರೆ ಅವಳಿ ಮಕ್ಕಳಾಗುತ್ತವಂತೆ!
ನಿಮಗಿದು ಅಚ್ಚರಿ ಅನಿಸಬಹುದು. ಆದರೆ ಆ ಊರಿನ ಜನ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನ ಇದನ್ನು ಬಹಳ ನಂಬುತ್ತಿದ್ದಾರೆ.
ಇವರ ನಂಬಿಕೆಗೆ ಸಾಕ್ಷಿ ಎಂಬಂತೆ ಈ ಊರಿನ ತುಂಬೆಲ್ಲಾ ಅವಳಿ ಮಕ್ಕಳೇ ಇವೆ.
ಆಂಧ್ರಪ್ರದೇಶದ ರಾಜಮಂಡ್ರಿ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ದೊಡ್ಡಿಗುಂಟಾ ಗ್ರಾಮದಲ್ಲಿರುವ ಬಾವಿಯೊಂದು ಅವಳಿ ಮಕ್ಕಳ ಬಾವಿ ಎಂದೇ ಫೇಮಸ್ ಆಗಿದೆ. ಈ ಬಾವಿಯನ್ನು ಇಲ್ಲಿನ ಜನ ಕವಲುಪಿಲ್ಲಲ ಬಾವಿ (ಅವಳಿಮಕ್ಕಳ ಬಾವಿ) ಎಂದೇ ಕರೆಯುತ್ತಾರೆ.
ಯಾರು ಈ ಬಾವಿಯ ನೀರು ಕುಡಿಯುತ್ತಾರೋ ಅವರಿಗೆ ಅವಳಿ ಮಕ್ಕಳೇ ಜನಿಸುತ್ತಾರೆ ಎಂಬ ಬಲವಾದ ನಂಬಿಕೆ ಇಲ್ಲಿನವರಲ್ಲಿದೆ.
ಅಕ್ಕಪಕ್ಕದ ಊರಿನ ಜನರೂ ಕೂಡ ಈ ಬಾವಿಯ ನೀರನ್ನು ತೆಗೆದುಕೊಂಡು ಹೋಗಿ ಕುಡಿಯುತ್ತಾರೆ. ಅನೇಕರು ತಮ್ಮ ಮನೆಯ ಮಕ್ಕಳು ಸೊಸೆಯಂದಿರಿಗಾಗಿ ಈ ನೀರನ್ನು ಇಲ್ಲಿಂದ ವಾಹನಗಳಲ್ಲಿ ಹೊತ್ತುಕೊಂಡು ಹೋಗುತ್ತಾರೆ. ಅವಳಿ ಮಕ್ಕಳು ಜನಿಸಬೇಕಾದರೆ ಕನಿಷ್ಠ ಮೂರು ತಿಂಗಳು ಈ ನೀರು ಕುಡಿಯಬೇಕು ಎನ್ನುತ್ತಾರೆ ಇಲ್ಲಿನ ಜನ.
ಟ್ರಾವೆಲ್ ಬ್ಲಾಗರ್, ಕನ್ನಡ ಯೂಟ್ಯೂಬರ್ ಅರುಣ್ ಎಂಬುವರು ತಮ್ಮ ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಅಚ್ಚರಿಯೆಂದರೆ, ಈ ದೊಡ್ಡಿಗುಂಟಾ ಗ್ರಾಮದಲ್ಲಿ 120 ಅವಳಿ ಮಕ್ಕಳಿದ್ದಾರೆ ಎನ್ನುತ್ತಾರೆ ಈ ಗ್ರಾಮದ ಜನ. ಮೂರು ತಿಂಗಳ ಕಾಲ ನಿರಂತರ ಈ ನೀರನ್ನು ಕುಡಿದರೆ ಶೇಕಡಾ 100 ರಷ್ಟು ಅವಳಿ ಮಕ್ಕಳು ಜನಿಸುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿನ ಶಾಲೆಗಳಲ್ಲೂ ಸಾಕಷ್ಟು ಅವಳಿ ಮಕ್ಕಳನ್ನು ಕಾಣಬಹುದಾಗಿದೆ. ಹೀಗಾಗಿ ಇಲ್ಲಿ ಇದೊಂದು ಸಣ್ಣ ಉದ್ಯಮದಂತಾಗಿದೆ. ಇಲ್ಲಿನ ಅಂಗಡಿಗಳಲ್ಲಿ ನೀರು ಸಾಗಿಸುವುದಕ್ಕೆ ಬೇಕಾದ ಬಿಳಿ ಬಣ್ಣದ 5 ರಿಂದ 10 ಲೀಟರ್‌ನ ಕ್ಯಾನ್‌ಗಳು ಸಾಕಷ್ಟು ಮಾರಾಟವಾಗುತ್ತಿದೆ.
ಅಮೆರಿಕಾದಲ್ಲಿ ವೈದ್ಯರಾಗಿದ್ದವರೊಬ್ಬರು ತಮ್ಮ ಪುತ್ರಿಗೆ ಮಕ್ಕಳಾಗಿಲ್ಲವೆಂದು ಈ ನೀರನ್ನು ಪಾರ್ಸೆಲ್ ಮಾಡಿಸಿಕೊಂಡಿದ್ದರು. ಅವರ ಪುತ್ರಿಗೆ ನಂತರದಲ್ಲಿ ಗಂಡು ಮಗುವಾಯ್ತು ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಈ ಬಾವಿ ಪಕ್ಕದಲ್ಲೇ ಸಂತಾನಲಕ್ಷ್ಮಿ ದೇಗುಲವೂ ಇದೆ.
https://www.instagram.com/reel/DNDTkzCPWWV/?igsh=azU4ZWllZjVxYXo2
https://youtu.be/ps6uJLf3nBs?si=RiIsW8eaQlcnxb9e
cat kumar! ವಸತಿ ಪ್ರಮಾಣಪತ್ರಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿದ ಬೆಕ್ಕು!