newsics.com
ಬೆಂಗಳೂರು: ಅಲ್ ಕೈದಾ ಉಗ್ರ ಸಂಘಟನೆ ಪರ ಬೆಂಗಳೂರಿನಿಂದ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಶಮಾ ಪರ್ವೀನ್ ಅನ್ಸಾರಿಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗುಜರಾತ್ ಎಟಿಎಸ್ ಆಕೆಯನ್ನು ಬಂಧಿಸಿದ್ದಲ್ಲದೆ, ಆಕೆಯ ಉಗ್ರ ಚಟುವಟಿಕೆ ಕುರಿತಾದ ಅನೇಕ ರಹಸ್ಯ ಮಾಹಿತಿಗಳನ್ನು ಬಯಲಿಗೆಳೆದಿದೆ.
ಶಮಾ ಪರ್ವೀನ್ ಅನ್ಸಾರಿ ಜಾರ್ಖಂಡ್ ಮೂಲದವಳಾಗಿದ್ದು, ಪ್ರಸ್ತುತ ಬೆಂಗಳೂರಿನ ಆರ್‌ಟಿ ನಗರದಲ್ಲಿ ತಾಯಿ, ಸಹೋದರ ಜೊತೆ ವಾಸವಿದ್ದಳು. ಇಲ್ಲಿದ್ದುಕೊಂಡೇ ಆನ್ಲೈನ್ ಮೂಲಕ ಜಿಹಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದಳು. ಪ್ರಚೋದನಾಕಾರಿ ಸಂದೇಶಗಳನ್ನು ಹಂಚುತ್ತಿದ್ದಳು.
ಅನ್ಸಾರಿ 2 ಫೇಸ್‌ಬುಕ್ ಹಾಗೂ 1 ಇನ್‌ಸ್ಟಾಗ್ರಾಂ ಖಾತೆ ಬಳಸುತ್ತಿದ್ದಳು. ಇನ್‌ಸ್ಟಾದಲ್ಲಿ ಸುಮಾರು 10,000 ಹಿಂಬಾಲಕರನ್ನು ಹೊಂದಿದ್ದು, ಪ್ರಚೋದನಕಾರಿ, ಜಿಹಾದಿ ಹಾಗೂ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು. ಭಾರತ ಪಾಕ್ ವಿರುದ್ಧ ಆಪರೇಷನ್ ಸಿಂದೂರ ಕೈಗೊಂಡ 2 ದಿನಗಳ ಬಳಿಕ, ಅಂದರೆ ಮೇ 9ರಂದು ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಅನ್ಸಾರಿ, ಭಾರತದ ಮೇಲೆ ದಾಳಿ ಮಾಡುವ ಸುವರ್ಣಾವಕಾಶವನ್ನು ಬಳಸಿಕೊಳ್ಳುವಂತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ವಿನಂತಿ ಮಾಡಿದ್ದಳು ಎಂದು ಎಟಿಎಸ್ ಮಾಹಿತಿ ನೀಡಿದೆ.
ಮುನೀರ್‌ನ ಫೋಟೋ ಹಂಚಿಕೊಂಡು, ನೀವು ಒಂದು ಸುವರ್ಣಾವಕಾಶ ಹೊಂದಿದ್ದೀರಿ. ಇಸ್ಲಾಮಿನ ಅನುಷ್ಠಾನ, ಮುಸ್ಲಿಂ ಪ್ರದೇಶಗಳ ಏಕೀಕರಣ ಹಾಗೂ ಹಿಂದುತ್ವ ಮತ್ತು ಯಹೂದಿ ಧರ್ಮವನ್ನು ನಿರ್ಮೂಲನೆ ಮಾಡಲು ಖಿಲಾಫತ್ ಯೋಜನೆಯನ್ನು ಸ್ವೀಕರಿಸಿ. ಮುನ್ನುಗ್ಗಿ ಎಂದು ಪೋಸ್ಟ್ ಮಾಡಿದ್ದಾಗಿ ಎಟಿಎಸ್ ಬಹಿರಂಗಪಡಿಸಿದೆ.