newsics.com
ಜಮ್ಮು ಕಾಶ್ಮೀರಕ್ಕೆ ಮರಳಿ ರಾಜ್ಯದ ಸ್ಥಾನಮಾನ ದೊರಕಿಸಿಕೊಡುವಂತೆ ಕೋರಿರುವ ಅರ್ಜಿಯನ್ನು ಆಗಸ್ಟ್ 8ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಅರ್ಜಿದಾರರಾದ ಜಹೂರ್ ಅಹ್ಮದ್ ಭಟ್ ಮತ್ತು ಕಾರ್ಯಕರ್ತ ಖುರ್ಷೈದ್ ಅಹ್ಮದ್ ಮಲಿಕ್ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಆ ದಿನದ ಪ್ರಕರಣದ ಪಟ್ಟಿಯಿಂದ ಈ ವಿಷಯವನ್ನು ತೆಗೆದುಹಾಕಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರನ್ನು ಕೋರಿದ್ದಾರೆ. ಸಿಜೆಐ ಗವಾಯಿ ಈ ಮನವಿಗೆ ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ರಾಜ್ಯದ ಸ್ಥಾನಮಾನ ನೀಡುವ ಮೊದಲೇ ಚುನಾವಣೆ ನಡೆಸಿ ಶಾಸಕಾಂಗ ಸಭೆ ರಚಿಸಲು ಹೊರಡುವುದು ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಕಾಂಗ್ರೆಸ್ ಮತ್ತು ವಿಧಾನಸಭೆಯ ಕೆಲವು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರ ಪ್ರಸ್ತುತ ಕಾಶ್ಮೀರದಲ್ಲಿ ಅಧಿಕಾರ ನಡೆಸುತ್ತಿದೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಕೆಲ ವರ್ಷಗಳ ಹಿಂದೆ ರದ್ದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಲಾಗಿತ್ತು. ಅದೇ ರಾಜ್ಯದಿಂದ ಲಡಾಖ್ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಲಾಗಿತ್ತು.
ಸಂವಿಧಾನದ 370ನೇ ರದ್ದತಿ ಎತ್ತಿಹಿಡಿದು ಡಿಸೆಂಬರ್ 2023ರಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಕೋರಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮೇ 2024ರಲ್ಲಿ ವಜಾಗೊಳಿಸಿತ್ತು.