newsics.com
ನಮ್ಮ ದಿನಚರಿ ಬೆಳಗ್ಗೆ ಟೀ ಕುಡಿಯುವುದರೊಂದಿಗೇನೇ ಆರಂಭವಾಗುತ್ತದೆ, ಇನ್ನು ದಿನವಿಡೀ ಕೆಲವರು ಅನೇಕ ಕಪ್ ಚಹಾವನ್ನು ತಮ್ಮ ದೇಹಕ್ಕೆ ಸೇರಿಸಿಕೊಂಡಿರುತ್ತಾರೆ. ಚಹಾ ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂಬುದು ನಿಮಗೆ ಗೊತ್ತಿರಬೇಕಾಗುತ್ತದೆ. ನೀವು ಚಹಾದೊಂದಿಗೆ ಈ ರೀತಿ ಮಾಡಿದರೆ, ಇನ್ನಷ್ಟು ಅಪಾಯಕಾರಿ ಆಗಬಹುದು.
ಹೆಚ್ಚಿನವರು ಚಹಾ ಮಾಡುವುದರಿಂದ ಹಿಡಿದು ಕುಡಿಯುವವರೆಗೆ ಒಂದಷ್ಟು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಆರೋಗ್ಯಕ್ಕೆ ತುಂಬಾನೇ ಹಾನಿಯಾಗುತ್ತದೆಯಂತೆ. ಈ ಬಗ್ಗೆ ಪೌಷ್ಠಿಕತಜ್ಞೆ ಕಿರಣ್ ಕುಕ್ರೇಜಾ ಮಾಹಿತಿಯನ್ನು ನೀಡಿದ್ದು, ಅವರು ಹೇಳುವಂತೆ ಚಹಾ ಮಾಡುವಾಗ ಹಾಗೂ ಕುಡಿಯುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಮತ್ತು ಈ ತಪ್ಪುಗಳಿಂದ ಆಗುವಂತಹ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿಸಿದ್ದಾರೆ.ಈ ಕುರಿತ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಹೆಚ್ಚಿನವರು ತಮ್ಮ ಮನೆಯಲ್ಲಿ ಚಹಾ ಸೋಸಲು ಪ್ಲಾಸ್ಟಿಕ್ ಜರಡಿಯನ್ನು ಬಳಕೆ ಮಾಡುತ್ತಾರೆ. ಅಗ್ಗದಲ್ಲಿ ಲಭ್ಯವಿದೆ ಎಂಬ ಕಾರಣಕ್ಕೆ ಎಲ್ಲರೂ ಇದೇ ಫಿಲ್ಟರ್‌ನ್ನು ಬಳಸುತ್ತಾರೆ. ಬಿಸಿ ಚಹಾವನ್ನು ಪ್ಲಾಸ್ಟಿಕ್ ಜರಡಿಯಲ್ಲಿ ಸೋಸಿದಾಗ, ಜರಡಿಯಲ್ಲಿರುವ ಪ್ಲಾಸ್ಟಿಕ್ ಕಣಗಳು ಚಹಾಕ್ಕೆ ಸೇರುತ್ತವೆ. ಇದು ನಮ್ಮ ದೇಹದಲ್ಲಿ ಸೇರಿಕೊಂಡು, ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಸ್ಟೀಲ್ ಫಿಲ್ಟರ್‌ಗಳನ್ನು ಬಳಸುವುದು ಉತ್ತಮ.
ಒಮ್ಮೆ ತಯಾರಿಸಿದ ಚಹಾವನ್ನು ಪದೇ ಪದೇ ಬಿಸಿ ಮಾಡುವುದು. ಹೀಗೆ ಒಮ್ಮೆ ತಯಾರಿಸಿದ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಚಹಾದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ, ಇದರಿಂದಾಗಿ ಹೊಟ್ಟೆಯಲ್ಲಿ ಜೀರ್ಣಕಾರಿ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಅನೇಕ ಜನರು ಹಾಲಿಗೆ ಚಹಾ ಪುಡಿ ಹಾಕಿ ಚಹಾ ಮಾಡುತ್ತಾರೆ. ಹೀಗೆ ಮಾಡಿದರೆ ಅದರಲ್ಲಿರುವ ಪ್ರೋಟೀನ್, ಉತ್ಕರ್ಷಣ ನಿರೋಧಕ ಅಂಶ ಕಳೆದು ಹೋಗುತ್ತದೆ. ಆದ್ದರಿಂದ ಮೊದಲು ಸ್ವಲ್ಪ ನೀರಿನಲ್ಲಿ ಚಹಾ ಪುಡಿಯನ್ನು ಹಾಕಿ ಕುದಿಸಿ, ನಂತರ ಅದಕ್ಕೆ ಹಾಲು ಸೇರಿಸಬೇಕು ಎಂದು ಹೇಳಿದ್ದಾರೆ.
https://www.instagram.com/reel/DM16l6StMH2/?igsh=dm11N2t5eDNxMXFx