newsics.com
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ವೈದ್ಯ ಡಾ. ಹೆಚ್ ಎಂ ವೆಂಕಟಪ್ಪ ಅವರು, ತಂದೆ-ತಾಯಿ ಸ್ಮರಣಾರ್ಥವಾಗಿ ತಮ್ಮದೇ ಕಣ್ವ ಫೌಂಡೇಷನ್ ವತಿಯಿಂದ, ತಾವು ಓದಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟಿದ್ದಾರೆ.
ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಸುತ್ತಮುತ್ತಲಿನ ಗ್ರಾಮಗಳ ಹೆಚ್ಚಿನ ಪೋಷಕರು ಪೈಪೋಟಿಗೆ ಬಿದ್ದು ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಈ ವರ್ಷ ಬೇಸಿಗೆ ರಜೆ ಮುಗಿಯುವ ಹೊತ್ತಿಗೆ ಹಳೇ ಶಿಥಿಲ ಕಟ್ಟಡಗಳನ್ನು ನೆಲಸಮ ಮಾಡಿ, ಹೊಸ ಕಟ್ಟಡಕ್ಕೆ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಎರಡು ಪ್ರತ್ಯೇಕ ಕಟ್ಟಡಗಳ ಹೈಟೆಕ್ ಶಾಲೆ 1,500 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಇದೆ. ಗ್ರಾಮದ ಸುತ್ತಲಿನ 12 ಹಳ್ಳಿಗಳ ಮಕ್ಕಳು ಇಲ್ಲಿ ಓದುತ್ತಿದ್ದಾರೆ. ನೂತನ ಶಾಲಾ ಕಟ್ಟಡವನ್ನ ಶುಕ್ರವಾರ ಡಿಸಿಎಂ ಡಿಕೆ ಶಿವಕುಮಾರ್ ಉದ್ಘಾಟಿಸಿದರು.
ಸದ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಒಳಗೊಂಡಂತೆ ಸುಮಾರು 850 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ದ್ವಿತೀಯ ಪಿಯುವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಇಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವರ್ಷ 150ಕ್ಕೂ ಅಧಿಕ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲೂ ಕಾನ್ವೆಂಟ್ ಮಾದರಿ ಶಿಕ್ಷಣ ಸಿಗಬೇಕು ಎಂಬ ಆಶಯದೊಂದಿಗೆ ಶಾಲೆಯನ್ನು ವೈದ್ಯ ಹೆಚ್ ಎಂ ವೆಂಕಟಪ್ಪ ಕಟ್ಟಿಸಿದ್ದಾರೆ.
8ನೇ ತರಗತಿವರೆಗೆ ತಮ್ಮೂರಿನ ಈ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಿದ ವೆಂಕಟಪ್ಪ, ಮುಂದೆ ಸರ್ಕಾರಿ ವೈದ್ಯರಾದರು. ವಿವಿಧೆಡೆ ಹಲವು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ನಂತರ ಬೆಂಗಳೂರಿನಲ್ಲಿ ಕಣ್ವ ಡಯಾಗ್ನಾಸ್ಟಿಕ್ ಕೇಂದ್ರ ಆರಂಭಿಸಿದ ಅವರು ಕಣ್ವ ಫೌಂಡೇಷನ್ ಆರಂಭಿಸಿ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವೈದ್ಯ ಹೆಚ್ ಎಂ ವೆಂಕಟಪ್ಪ ಅವರ ಕಾರ್ಯಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ಕಟ್ಟಡದಲ್ಲಿ 51 ಕೊಠಡಿಗಳು ಇವೆ. 10 ಸಾವಿರ ಪುಸ್ತಕಗಳ ಸಾಮರ್ಥ್ಯದ ಗ್ರಂಥಾಲಯ ಇದೆ. 40 ಕಂಪ್ಯೂಟರ್ ಹೊಂದಿರುವ ಲ್ಯಾಬ್ ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಸುಸಜ್ಜಿತ ಡೆಸ್ಕ್ ಹಾಗೂ ಡಿಜಿಟಲ್ ಬೋರ್ಡ್ ಸಿದ್ಧವಾಗುತ್ತಿದೆ. ಕಟ್ಟಡದ ಪ್ರತಿ ಅಂತಸ್ತಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿವೆ.