newsics.com
ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ಅಲ್ಲಿ ನಡೆಯಿತು. ಸರ್ಕಾರದ ಪರ ವಕೀಲ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರ ವಾದ ಮತ್ತು ಪ್ರತಿವಾದ ಆಲಿಸಿದ ನ್ಯಾಯಾಲಯವು ಜುಲೈ 2ಕ್ಕೆ ವಿಚಾರಣೆ ಮುಂದೂಡಿ ಆದೇಶಿಸಿತು.
ಸರ್ಕಾರದ ಪರವಾಗಿ ಎಸ್ಪಿಪಿ ಪ್ರೊಫೆಸರ್ ರವಿವರ್ಮ ಕುಮಾರ್ ಅವರು ವಾದ ಮಂಡಿಸಿದರು. ಸುಪ್ರೀಂಕೋರ್ಟ್ ಕೂಡ ಪ್ರಜ್ವಲ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಬದಲಾದ ಪರಿಸ್ಥಿತಿ ಇದ್ದರೆ ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು. ಆದರೆ ಪ್ರಕ್ರಿಯೆ ಉಲ್ಲಂಘಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು. ಬಳಿಕ ಹೈಕೋರ್ಟ್ ಜುಲೈ 2ಕ್ಕೆ ವಿಚಾರಣೆಯನ್ನು ಮುಂದೂಡಿತು.
ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ಮನೆ ಕೆಲಸದ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ವಿರುದ್ಧ ಮೊದಲಿಗೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆನಂತರ ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್ 164 ಹೇಳಿಕೆ ಆಧರಿಸಿ ಪ್ರಜ್ವಲ್ ವಿರುದ್ಧ ಮಾತ್ರ ಅತ್ಯಾಚಾರ ಆರೋಪ ಸೇರಿಸಿ, ಸಕ್ಷಮ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡವು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದೆ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾತ್ರ ಇದೆ. ಈ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ದೊರೆತಿದ್ದು, ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಜಾಮೀನು ಕೋರಿದ್ದಾರೆ.