newsics.com
ಕಲಬುರ್ಗಿ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ನ ಕಂಡಕ್ಟರ್ ಮಹಿಳೆ ಬಳಿ ಆಧಾರ್ ಕಾರ್ಡ್ ಕೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಬಳಿಯ ರಾವೂರ್‌ನಲ್ಲಿ KKRTC ಬಸ್‌ಗೆ ಓರ್ವ ಮುಸ್ಲಿಂ ಮಹಿಳೆ ಹತ್ತಿದ್ದಾರೆ ಎನ್ನಲಾಗಿದೆ. ಬಸ್ ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಎಂಬವರು ಎಲ್ಲರಲ್ಲಿ ಕೇಳುವಂತೆ ಆ ಮಹಿಳೆಗೆ ಟಿಕೆಟ್ ಕೇಳಿದ್ದಾರೆ. ಆಗ ಮಹಿಳೆ ತಮ್ಮ ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿಯನ್ನು ನೀಡಿದ್ದಾರೆ. ಆದರೆ, ಕಂಡಕ್ಟರ್ ಒರಿಜಿನಲ್ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ, ಇತರ ಪ್ರಯಾಣಿಕರಿಗೆ ಟಿಕೆಟ್ ನೀಡಲು ತೆರಳಿರುವ ಕಂಡಕ್ಟರ್, ಮರಳಿ ಬಂದಾಗ ಮಹಿಳೆಗೆ ಒರಿಜಿನಲ್ ಆಧಾರ್ ಕಾರ್ಡ್ ತೋರಿಸುವಂತೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಆದರೆ, ಮಹಿಳೆ ಒರಿಜಿನಲ್ ಆಧಾರ್ ಕಾರ್ಡ್‌ಗಿಂತ ಬೇರೆಯವರ ಆಧಾರ್ ಕಾರ್ಡ್ ತೋರಿಸಿದ್ದಾರೆ. ಇದನ್ನು ಗಮನಿಸಿದ ಕಂಡಕ್ಟರ್, “ಇದು ನಿಮ್ಮ ಆಧಾರ್ ಕಾರ್ಡ್ ಅಲ್ಲ, ದಯವಿಟ್ಟು ಬಸ್‌ನಿಂದ ಇಳಿಯಿರಿ” ಎಂದು ಹೇಳಿದ್ದಾರೆ. ಜೊತೆಗೆ, “ನೀವು ಇಂತಹ ಕೃತ್ಯ ಮಾಡಿದರೆ ನಮ್ಮ ಉದ್ಯೋಗಕ್ಕೆ ತೊಂದರೆಯಾಗುತ್ತದೆ” ಎಂದು ವಿನಂತಿಸಿದ್ದಾರೆ ಎನ್ನಲಾಗಿದೆ.
ಕಂಡಕ್ಟರ್ ಈ ರೀತಿ ಹೇಳುತ್ತಿದ್ದಂತೆ ಕೋಪಗೊಂಡ ಮಹಿಳೆ, ತಮ್ಮ ಸಂಬಂಧಿಕರಿಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ವಾಡಿಯಲ್ಲಿ ಬಸ್ ಆಗಮಿಸಿದ ತಕ್ಷಣ, ಮಹಿಳೆಯ ಸಂಬಂಧಿಕರು ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ತಕ್ಷಣ ಧಾವಿಸಿದ ಸ್ಥಳೀಯರು, ಕಂಡಕ್ಟರ್‌ನನ್ನು ಬಿಡಿಸಿ, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.