newsics.com
ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತುಮಕೂರಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ನಿಟ್ಟೂರಿನಿಂದ ಪಾದಯಾತ್ರೆ ಮೂಲಕ ಕಾಮಗಾರಿ ನಡೆಯುತ್ತಿರುವ ಸುಂಕಾಪುರದತ್ತ ಸಾವಿರಾರು ರೈತರು, ಹೋರಾಟಗಾರರು ಲಗ್ಗೆಯಿಟ್ಟಿದ್ದಾರೆ. ಗುಬ್ಬಿಯ ಸುಂಕಾಪುರದಲ್ಲಿ ಹೇಮಾವತಿ ನೀರಿಗಾಗಿ ಹೋರಾಟ ಕ್ಷಣ ಕ್ಷಣಕ್ಕೂ ಕಾವೇರುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುಂಕಾಪುರ ನಾಲೆ ಬಳಿಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ. ಆದರೂ ಲೆಕ್ಕಿಸದೇ ರೈತರು ಹಾಗೂ ಬಿಜೆಪಿ ನಾಯಕರು, ಕಾರ್ಯಕರ್ತರು 144 ಸೆಕ್ಷನ್ ವ್ಯಾಪ್ತಿಯ ಒಳಗೆ ಹಾಗೂ ಹೊರಗೆ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರತಿಭಟನೆ ತೀವ್ರ ಸ್ವರೂಪವೇ ಪಡೆದಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ. ತುಮಕೂರು ಮುಖ್ಯ ರಸ್ತೆಯೇ ಮಧ್ಯೆಯೇ ಟ್ರ್ಯಾಕ್ಟರ್ ನಲ್ಲಿ ಮಣ್ಣು ತಂದು ಹಾಕಿ ಸರ್ಕಾರದ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದ್ರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಕಾಮಗಾರಿಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಬಳಿಕ ರೈತರು, ಬಿಜೆಪಿ ನಾಯಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಅಲ್ಲದೇ ತಾತ್ಕಾಲಿಕ ಮಾತ್ರವಲ್ಲ ಸಂಪೂರ್ಣವಾಗಿ ಇದು ನಿಲ್ಲಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೀರಾವರಿ ಹೋರಾಟಕ್ಕೆ ಕಾರಣವೇನು?
ಈ ಯೋಜನೆಗೆ ತುಮಕೂರು ಜಿಲ್ಲೆಯ ರಾಜಕಾರಣಿಗಳು, ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಏನಂದ್ರೆ ಗೊರೂರು ಡ್ಯಾಂನಿಂದ ವರ್ಷಕ್ಕೆ 24 TMC ನೀರನ್ನು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್‌ಲೇನ್ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವುದು ತುಮಕೂರು ಜಿಲ್ಲೆಯ ರಾಜಕಾರಣಿ ಹಾಗೂ ರೈತರ ಆಕ್ಷೇಪ.
ಇದರ ಜೊತೆಗೆ ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್‌ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲ್ಲೂಕಿಗೆ ನೀರು ಸಿಗದಂತಾಗುತ್ತೆ. ತುಮಕೂರು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ತುಮಕೂರು ಜಿಲ್ಲೆಯ ರಾಜಕಾರಣಿಗಳದ್ದು. ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದರೂ, ಇದುವರೆಗೂ ಯಾವ ವರ್ಷವೂ ಕೂಡ 24 ಟಿಎಂಸಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದೇ ಇಲ್ಲ. ತುಮಕೂರು ಜಿಲ್ಲೆಯ ಕೆರೆಕಟ್ಟೆಗಳಿಗೆ, ಕುಡಿಯುವ ಉದ್ದೇಶಕ್ಕೆ ಕೃಷಿ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತೆ.
ತುಮಕೂರು ನಗರ, ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರುನ್ನು ಬಳಕೆ ಮಾಡಲಾಗುತ್ತೆ. ಗೊರೂರು ಡ್ಯಾಂ ನೀರನ್ನು ತುಮಕೂರು ನಗರದ ಬಳಿಯ ಬುಗುಡನಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೈಪ್ ಮೂಲಕ ತುಮಕೂರು ನಗರಕ್ಕೆ ಪೂರೈಸಲಾಗುತ್ತಿದೆ. ಇದೇ ರೀತಿ ಮಧುಗಿರಿ, ಶಿರಾ ಪಟ್ಟಣಗಳಿಗೂ ಕೆರೆಗಳಿಗೆ ನೀರು ತುಂಬಿಸಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕುಗಳು ಕೂಡ ಹೇಮಾವತಿ ನೀರನ್ನು ಕುಡಿಯುವ ನೀರು, ಕೃಷಿ ಉದ್ದೇಶಕ್ಕೆ ಅವಲಂಬಿಸಿವೆ. ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರಿನ ಮೂಲ ಬಿಟ್ಟರೇ, ಬೇರೆ ನದಿ ನೀರಿನ ಮೂಲಗಳಿಲ್ಲ. ತುಮಕೂರು ಜಿಲ್ಲೆಗೆ ಹೇಮಾವತಿಯ ಜೀವ ನದಿ. ಹೀಗಾಗಿ ತುಮಕೂರು ಜಿಲ್ಲೆಯ ಜನರು, ರಾಜಕಾರಣಿಗಳು ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡಲ್ಲ ಎಂದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
Ration Card ಅನರ್ಹರ ಬಿಪಿಎಲ್ ಕಾರ್ಡ್ ರದ್ದುಪಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ