newsics.com
ಬೆಂಗಳೂರು: ರಾಜ್ಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಾಲಿ ಇರುವ ಜನ ಔಷಧ ಕೇಂದ್ರಗಳ ಒಪ್ಪಂದ ಸ್ಥಗಿತಗೊಳಿಸುವಂತೆ ಸರ್ಕಾರ, ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರುಗಳು ಬ್ರಾಂಡೆಡ್ ಔಷಧಿಗಳನ್ನು ಹೊರಗಡೆಯಿಂದ ತರುವಂತೆ ರೋಗಿಗಳಿಗೆ ಸಲಹಾ ಚೀಟಿಗಳನ್ನು ನೀಡುವುದು ಸರ್ಕಾರ ನಿಷೇಧಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ಔಷಧಿಗಳನ್ನು ಹೊರಗೆ ಖರೀದಿಸುವಂತೆ ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ನೀತಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ. ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪರಿಶೀಲನೆ ಹಂತದಲ್ಲಿ ಇರುವ 31 ಜನ ಔಷಧ ಕೇಂದ್ರಗಳ ಅರ್ಜಿಗಳಿಗೆ ಅನುಮತಿ ನೀಡದಂತೆ ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ, ಜನ ಔಷಧಿ ಕೇಂದ್ರಗಳನ್ನು ಪ್ರಾರಂಭಿಸುವ ನೀತಿಯನ್ನು ಸಮಗ್ರವಾಗಿ ಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ, ಸರ್ಕಾರಿ ಆಸ್ಪತ್ರೆಗಳ ಆವರಣದಿಂದ ಹೊರಗೆ ಇರುವ ಜನ ಔಷಧಿಕ ಕೇಂದ್ರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಜನ ಔಷಧಿ ಕೇಂದ್ರಗಳು ಮುಂದುವರೆಯುತ್ತವೆ.
ಜನೆರಿಕ್ ಔಷಧಿಗಳ ಖರೀದಿಗೆ ಸಾರ್ವಜನಿಕ ವಲಯದ ಔಷಧ ಉದ್ಯಮಗಳ ಬ್ಯೂರೋ (BPPI) ಯೊಂದಿಗೆ ಕೆಎಸ್ಎಂಎಸ್ಸಿಎಲ್ ವಿಶೇಷ ದರಗಳನ್ನು ರೂಪಿಸುತ್ತಿದೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳು ಬಿಪಿಪಿಐನಿಂದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸುವಂತೆ ಸರ್ಕಾರ ಆದೇಶಿಸಿದೆ.
No increase fees ವೈದ್ಯ, ದಂತವೈದ್ಯ ಕೋರ್ಸ್ ಶುಲ್ಕ ಹೆಚ್ಚಳ ಇಲ್ಲ: ಸಚಿವ