newsics.com
ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನದ ಲಾಹೋರ್ನಲ್ಲಿ ಡ್ರೋನ್ ಮೂಲಕ ದಾಳಿ ನಡೆದಿದೆ. ಲಾಹೋರ್ ವಿಮಾನ ನಿಲ್ದಾಣಗಳ ಬಳಿ ನಡೆದ ಸ್ಫೋಟದ ಸದ್ದು ಕಿಲೋಮೀಟರ್ ದೂರವರೆಗೆ ಕೇಳಿಸಿದೆ. ಈ ಸ್ಪೋಟದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಸೈರನ್ ಸದ್ದು ಮೊಳಗಿದೆ ಎಂದು ಅಲ್ಲಿನ ಪೊಲೀಸರೇ ದೃಢಪಡಿಸಿದ್ದಾರೆ.
ಪಾಕಿಸ್ತಾನದ ಪೊಲೀಸರು ಮತ್ತು ಅಧಿಕಾರಿಗಳು ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾಹೋರ್ನ ಗೋಪಾಲನಗರ ಮತ್ತು ನಾಸಿರಾಬಾದ್ ಪ್ರದೇಶ ಹಾಗೂ ವಾಲ್ಟನ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ಫೋಟದ ಸದ್ದು ಕೇಳಿದೆ. ಸ್ಫೋಟದ ಸದ್ದು ಕೇಳುತ್ತಿದ್ದಂತೆ ಜನರು ಭಯದಿಂದ ಮನೆಗಳಿಂದ ಹೊರ ಬಂದಿದ್ದಾರೆ. ಕೆಲವರು ದಟ್ಟವಾದ ಹೊಗೆ ನೋಡಿರೋದಾಗಿಯೂ ಹೇಳಿದ್ದಾರೆ.
ಭಾರತದ ಏರ್ಸ್ಟ್ರೈಕ್ ಬೆನ್ನಲ್ಲೇ ಪಾಕಿಸ್ತಾನದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತುರ್ತು ಸೇವೆಗೆ ಸನ್ನದ್ದರಾಗಿರುವಂತೆ ಆದೇಶಿಸಲಾಗಿದೆ. ದೇಶದ ವಾಯುಮಾರ್ಗವನ್ನು ಮುಂದಿನ 24 ರಿಂದ 36 ಗಂಟೆಯವರೆಗೆ ಬಂದ್ ಮಾಡಲಾಗಿದೆ. ಇಸ್ಲಾಮಾಬಾದ್ ಮತ್ತು ಪಂಜಾಬ್ ಭಾಗದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಭದ್ರತಾ ಸಿಬ್ಬಂದಿ ಮತ್ತು ಸೇನೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆಯನ್ನು ಪಾಕ್ ಸರ್ಕಾರ ನೀಡಿದೆ. ಈ ನಡುವೆ ಹೇಳಿಕೆ ನೀಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಭಾರತ ತನ್ನ ಆಕ್ರಮಣದಿಂದ ಹಿಂದೆ ಸರಿದ್ರೆ ಈ ಉದ್ವಘ್ನತೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.