newsics.com
ದಾವಣಗೆರೆ: ಇತ್ತೀಚಿನ ವರ್ಷಗಳಲ್ಲಿ ರೆಡಿಮೆಡ್ ಶಾವಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಿನ್ನೆಲೆ ಕಟ್ಟಿಗೆ ಮಣೆಗಳ ಜಾಗದಲ್ಲಿ ಯಂತ್ರಗಳು ಸದ್ದು ಮಾಡುತ್ತಿವೆ.
ಯುಗಾದಿ ಹಬ್ಬದ ಮೊದಲ ದಿನ ಅಭ್ಯಂಜನ ಸ್ನಾನ ಮಾಡಿದ ನಂತರ ಶಾವಿಗೆ ಬಸಿದು ಸವಿಯುವುದು ವಿಶೇಷ. ಹಾಗಾಗಿ ಹಬ್ಬದ ಹಿನ್ನೆಲೆ ಶಾವಿಗೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದೆ.
ಇನ್ನು ದಾವಣಗೆರೆಯ ಕೆಟಿಜೆ ನಗರದ 17ನೇ ಕ್ರಾಸ್‌ನಲ್ಲಿ ಏಳೆಂಟು ಕುಟುಂಬಗಳು ಗುಡಿ ಕೈಗಾರಿಕೆ ಮೂಲಕ ಕಳೆದ 50ರಿಂದ 60 ವರ್ಷಗಳಿಂದ ಶಾವಿಗೆ ತಯಾರಿಕೆಯಲ್ಲಿ ತೊಡಗಿವೆ. ಉತ್ಪಾದನೆ ಮಾಡಿ, ಸ್ವಾವಲಂಬಿ ಜೀವನ ನಡೆಸುತ್ತಿವೆ. ಆದ್ದರಿಂದ ಈ ಕುಟುಂಬಗಳು ನೆಲೆಸಿರುವ ಬೀದಿಯು ಶಾವಿಗೆ ಬೀದಿ ಎಂದೇ ಹೆಸರುವಾಸಿಯಾಗಿದೆ.
ದೀಪಾವಳಿಯಿಂದ ಬಸವ ಜಯಂತಿಯವರೆಗೂ ಶಾವಿಗೆ ತಯಾರಿಸುವ ಕಾಯಕ ನಡೆಯುತ್ತಿರುತ್ತದೆ. ಪ್ರತಿ ಕುಟುಂಬವೂ ವರ್ಷಕ್ಕೆ ಸರಾಸರಿ 150 ರಿಂದ 300 ಕ್ವಿಂಟಾಲ್ ಶಾವಿಗೆಯನ್ನು ಯಂತ್ರದ ಮೂಲಕ ಉತ್ಪಾದಿಸುತ್ತಿವೆ. ಹೀಗೆ ಆರು ತಿಂಗಳು ಉತ್ಪಾದನೆಯಾಗುವ ಶಾವಿಗೆಯನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಟ್ಟಿರುತ್ತಾರೆ. ಆದರೆ, ಈಗ ಯುಗಾದಿ ಹಬ್ಬದ ಹಿನ್ನೆಲೆ ಶಾವಿಗೆ ತಯಾರಿಸಿ ಬೀದಿಗಳಲ್ಲಿ ಒಣಗಿಸಲು ಇಟ್ಟಿರುವುದು ಗ್ರಾಹಕರನ್ನು ಆಕರ್ಷಿಸುತ್ತಿದೆ.
‘ಅಕ್ಕಿ ಹಿಟ್ಟು ಬೆರಿಸಿ ಶಾವಿಗೆ ತಯಾರಿಸಿದರೆ, ಬಸಿದ ತಕ್ಷಣವೇ ಮುದ್ದೆಯಾಗಿ ಬಿಡುತ್ತದೆ. ಆದರೆ, ನಾವು ಅಕ್ಕಿ ಬೆರಿಸದೆಯೇ ಚಿರೋಟಿ ರವಾ, ಗೋಧಿ, ರಾಗಿ ಹಿಟ್ಟಿನಿಂದ ತಯಾರು ಮಾಡುತ್ತೇವೆ. ಆದ್ದರಿಂದ ಬೆಳಗ್ಗೆ ಬಸಿದು ರಾತ್ರಿವರೆಗೆ ಇಟ್ಟರೂ ಶ್ಯಾವಿಗೆ ಎಳೆ, ಎಳೆಯಾಗಿಯೇ ಇರುತ್ತದೆ.
ಈ ಬೀದಿಯಲ್ಲಿ ತಯಾರಿಸುವ ಶಾವಿಗೆ ಗುಣಮಟ್ಟದಿಂದ ಕೂಡಿರುವ ಕಾರಣ ದೂರದ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿವಮೊಗ್ಗ ಸೇರಿ ನಾನಾ ಊರುಗಳಿಂದ ಜನತೆ ಇಲ್ಲಿಗೆ ಬಂದು, ಶಾವಿಗೆ ಖರೀದಿಸಿಕೊಂಡು ಹೋಗುತ್ತಾರೆ. ಅಲ್ಲದೇ, ಇಂಗ್ಲೆಂಡ್, ಅಮೆರಿಕಾದಲ್ಲಿ ನೆಲೆಸಿರುವವರು ತವರಿಗೆ ಬಂದಾಗ ಇಲ್ಲಿಂದ ಶಾವಿಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನೂ ಮೆಕ್ಕಾ ಮತ್ತು ಮದಿನಾಕ್ಕೂ ಖರೀದಿಸಿಕೊಂಡು ಹೋಗುತ್ತಾರೆ ಎಂದು ಶಾವಿಗೆ ತಯಾರಕರು ಹೇಳುತ್ತಾರೆ.