newsics.com | ನ್ಯೂಸಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಇತಿಹಾಸದಲ್ಲೇ ಅತ್ಯಂತ ಎತ್ತರದ ಅಪಾರ್ಟ್ಮೆಂಟ್ (Apartment) ಕಟ್ಟಡ ತೆರವಿಗೆ ಜಿಬಿಎ (Greater Bengaluru Authority) ತೀರ್ಮಾನ ಮಾಡಿದೆ.
ಮಹಾ ನಗರ ಬೆಂಗಳೂರಲ್ಲಿ ಭೀತಿ ಹುಟ್ಟಿಸಿದ್ದ ಬಹುಮಹಡಿ ಕಟ್ಟಡ ಡೆಮಾಲಿಷನ್ಗೆ ಮುಹೂರ್ತ ಫಿಕ್ಸ್ ಆಗಿದೆ.
ಬರೋಬ್ಬರಿ 18 ಮಹಡಿಯ ಕಟ್ಟಡ ಡೆಮಾಲಿಷನ್ಗೆ (Building Demolition) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿದ್ಧತೆ ನಡೆಸಿದೆ. ಅವೈಜ್ಞಾನಿಕವಾಗಿ ನಿರ್ಮಾಣ (Unscientifically Constructed) ಆಗಿರುವ ಹಿನ್ನೆಲೆ ಜಿಬಿಎ ಅಧಿಕಾರಿಗಳು ಈ ಕಟ್ಟಡವನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ.
ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!
ಬೆಂಗಳೂರಿನ ಕೂಡ್ಲು ಬಳಿ ಇರುವ SNN ರಾಜ್ ಕಾರ್ಪ್ ಒಡೆತನದಲ್ಲಿ ನಿರ್ಮಾಣ ಆಗಿರುವ 18 ಮಹಡಿಯ ಬಿಲ್ಡಿಂಗ್ ಉದ್ಘಾಟನೆಗೂ ಮುನ್ನ ಡೆಮಾಲಿಷನ್ಗೆ ಸಿದ್ಧವಾಗಿದೆ.
ಸುಮಾರು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಸಮಸ್ಯೆ ಉಂಟಾಗಿದೆ. ಕಟ್ಟಡಕ್ಕೆ ಸ್ಟ್ರಕ್ಚರಲ್ ಡ್ಯಾಮೇಜ್ ಹಾಗೂ ಕಟ್ಟಡ ಒಂದು ಕಡೆಗೆ ವಾಲಿದೆ. ಭವಿಷ್ಯದಲ್ಲಿ ದುರಂತ ಉಂಟಾಗುವ ಭೀತಿ ಹಿನ್ನೆಲೆ ಕಟ್ಟಡ ಡೆಮಾಲಿಷನ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಟ್ಟಡ ಡೆಮಾಲಿಷನ್ ವಿಚಾರಕ್ಕೆ ಸಂಬಂಧಪಟ್ಟಂತೆ SNN ರಾಜ್ ಕಾರ್ಪ್ ಮಾಲೀಕರು ಹಾಗೂ ಜಿಬಿಎ ಮುಖ್ಯ ಆಯುಕ್ತರ ನಡುವೆ ಸಭೆ ನಡೆದಿದೆ. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತರು ಕಟ್ಟಡ ಡೆಮಾಲಿಷನ್ಗೆ ಸೂಚನೆ ನೀಡಿದ್ದು, ಕಟ್ಟಡ ಡೆಮಾಲಿಷನ್ ಮಾಡಲು ಒಪ್ಪಿಕೊಂಡಿರುವ SNN ರಾಜ್ ಕಾರ್ಪ್ ಮಾಲೀಕರು ಇಡೀ ಡೆಮಾಲಿಷನ್ ಕಾರ್ಯಾಚರಣೆಯ ಖರ್ಚು ವೆಚ್ಚ ಭರಿಸೋದಾಗಿ ಒಪ್ಪಿಕೊಂಡಿದ್ದಾರೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದ ಸಭೆಯಲ್ಲಿ ಕಟ್ಟಡದ ಮಾಲೀಕರು, ಪೊಲೀಸ್ ಅಧಿಕಾರಿಗಳು, ದಕ್ಷಿಣ ನಗರ ಪಾಲಿಕೆ ಇಂಜಿನಿಯರ್ಗಳು ಹಾಗೂ ಬೆಂಗಳೂರು ನಗರ ಯೋಜನಾ ತಜ್ಞರೂ ಸಭೆಯಲ್ಲಿ ಭಾಗಿಯಾಗಿದ್ದರು.
ಮಣ್ಣು ಪರೀಕ್ಷೆ ವೇಳೆ ಯಡವಟ್ಟು!
ಬಿಲ್ಡಿಂಗ್ ನಿರ್ಮಾಣದ ಬಳಿಕ ಕಟ್ಟಡದಲ್ಲಿ ದೋಷ ಇರೋದು ಗೊತ್ತಾಗಿದೆ. ಈ ವೇಳೆ ನಾವೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರೇರಾಗೆ ಮಾಹಿತಿ ತಿಳಿಸಿದ್ದೇವೆ. ಈ ಕಟ್ಟಡದಲ್ಲಿ ಯಾವುದೇ ಜನರು ವಾಸ ಮಾಡಲು ಶುರು ಮಾಡಿಲ್ಲ, ಹೊಸ ಕಟ್ಟಡದ ಆರಂಭದಲ್ಲೇ ದೋಷ ಪತ್ತೆ ಮಾಡಿದ್ದೇವೆ. ಮಣ್ಣು ಪರೀಕ್ಷೆ ವೇಳೆ ಆದ ಯಡವಟ್ಟಿನಿಂದ ಈ ರೀತಿ ಆಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಕಟ್ಟಡದ ತೆರವು ಮಾಡುತ್ತೇವೆ. ಡೆಮಾಲಿಷನ್ನ ಸಂಪೂರ್ಣ ವೆಚ್ಚ SNN ರಾಜ್ ಕಾರ್ಪ್ ಸಂಸ್ಥೆಯೇ ಭರಿಸಲಿದೆ ಎಂದು ತಿಳಿಸಿದೆ.