newsics.com
ನವದೆಹಲಿ : ಮಾ. 14 ರಂದು ನಡೆದಿದ್ದ ಇ.ಡಿ ದಾಳಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಮುಖ್ಯನ್ಯಾಯಾಧೀಶ ಯಶವಂತ್ ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿದೆ.
ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಬೆಂಕಿ ಪ್ರಕರಣ ವರದಿಯಾದ ನಂತರ ಅಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವುದು ನ್ಯಾಯಾಂಗ ವಲಯದಲ್ಲಿ ಸಂಚಲನ ಮೂಡಿಸಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿರುವ ಯಶವಂತ್ ವರ್ಮಾ ಅವರ ಬಂಗಲೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು ಈ ಘಟನೆ ವೇಳೆ ವರ್ಮಾ ಅವರು ದೆಹಲಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಇತ್ತ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಮನೆ ಮಂದಿ ಪೊಲೀಸರಿಗೆ, ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ನ್ಯಾಯಾಧೀಶರ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ನೋಟಿನ ಕಂತೆಗಳು ಪತ್ತೆಯಾಗಿವೆ ಇದನ್ನು ಕಂಡು ಅಗ್ನಿಶಾಮಕ ಸಿಬ್ಬಂದಿಗಳು, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ವರ್ಮಾ ಅವರ ಬಳಿ ಪತ್ತೆಯಾಗಿರುವ ಹಣದ ಕುರಿತು ವಿವರಣೆ ನೀಡುವಂತೆ ಕೇಳಿದ್ದಾರೆ, ಇದಾದ ಬಳಿಕ ನಡೆದ ಕೊಲಿಜಿಯಂ ಸಭೆಯಲ್ಲಿ ನ್ಯಾಯಾಧೀಶರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕೊಲಿಜಿಯಂ ಸರ್ವಾನುಮತದಿಂದ ನಿರ್ಧರಿಸಿದ್ದು ಅದರಂತೆ ದೆಹಲಿ ಹೈಕೋರ್ಟ್ ನಿಂದ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣ ನ್ಯಾಯಾಂಗ ವ್ಯವಸ್ಥೆಗೆ ಕಳಂಕ ತರುವಂಥದ್ದಾಗಿದ್ದು, ತಕ್ಷಣ ನ್ಯಾಯಮೂರ್ತಿ ವರ್ಮಾ ಅವರ ರಾಜೀನಾಮೆಗೆ ಸೂಚಿಸಲಾಗುವುದು. ಇದಕ್ಕೆ ನಿರಾಕರಿಸಿದರೆ, ಇಲಾಖಾ ವಿಚಾರಣೆ ಆರಂಭಿಸಿ, ಸಂಸತ್ತಿನಲ್ಲಿ ಅವರ ವಜಾ ನಿರ್ಧಾರ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಐವರು ಸದಸ್ಯರ ಕೊಲಿಜಿಯಂ ಸ್ಪಷ್ಟಪಡಿಸಿದೆ