newsics.com
ಇಂತಹ ಗುಬ್ಬಚ್ಚಿಗಳು ಇದೀಗ ಗೂಡು ಕಟ್ಟಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುವಂತಹ ಸ್ಥಿತಿಗೆ ತಲುಪಿವೆ. 13 ವರ್ಷಗಳ ಆಯಸ್ಸು ಹೊಂದಿದ್ದ ಗುಬ್ಬಚ್ಚಿಗಳು ಈಗ 5 ವರ್ಷಗಳಲ್ಲೇ ಸಾಯುತ್ತಿವೆ. ಇದಕ್ಕೆ ಕಾರಣ ಮಾನವನ ತಾಂತ್ರಿಕ ಬೆಳವಣಿಗೆ ಎಂದರೆ ತಪ್ಪಾಗಲಾರದು.
ಆಧುನಿಕತೆಯ ಭರಾಟೆಯಲ್ಲಿ ಹೆಂಚಿನ ಮನೆಗಳೆಲ್ಲವೂ ಆರ್‌ಸಿಸಿ ಮನೆಗಳಾಗಿ ಬದಲಾಗುತ್ತಿವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಹಿಂದೆ ಇದ್ದ ಕೊಡಗಿನಲ್ಲಿ ಈಗ ಎಲ್ಲೆಂದರಲ್ಲಿ ಆರ್‌ಸಿಸಿ ಮನೆ ನಿರ್ಮಾಣ ಕಾಮಗಾರಿಗಳೇ ಕಾಣಿಸುತ್ತಿವೆ. ಇವುಗಳು ಗುಬ್ಬಚ್ಚಿಯ ಗೂಡು ಕಟ್ಟುವ ತಾಣವನ್ನೇ ಕಸಿದುಕೊಳ್ಳುತ್ತಿವೆ.
ಗುಬ್ಬಚ್ಚಿಗಳು ಮನೆಗೆ ಬರುವುದು ಒಳ್ಳೆಯದು ಎಂದು ನಮ್ಮ ಹಿರಿಯರು ಭಾವಿಸಿದ್ದರು. ಗುಬ್ಬಚ್ಚಿಗಳು ಬಂದು ತಂಗುವ ಮನೆಯಲ್ಲಿ ಸಂತಾನಾಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇತ್ತು. ಕೆಲವು ನಂಬಿಕೆಗಳು ಒಳ್ಳೆಯದನ್ನು ಮಾಡುತ್ತವೆ. ಅಂತಹ ನಂಬಿಕೆಗಳಲ್ಲಿ ಇದು ಒಂದು.
ಗುಬ್ಬಚ್ಚಿಗಳು ಸಾಮಾನ್ಯವಾಗಿ ರೆಂಬೆ, ಕೊಂಬೆಗಳಲ್ಲಿ, ದೊಡ್ಡ ಮರಗಳಲ್ಲಿ ಗೂಡು ಕಟ್ಟುವುದು ಕಡಿಮೆ. ಅವುಗಳು ಮನೆಯ ಜಂತಿಗಳಲ್ಲಿ, ಸಂದುಗೊಂದುಗಳಲ್ಲಿ ಗೂಡು ಕಟ್ಟುತ್ತವೆ. ಆದರೆ, ಮನೆಗಳೆಲ್ಲವೂ ಆಧುನೀಕರಣಗೊಳ್ಳುತ್ತಿದ್ದಂತೆ ಗುಬ್ಬಚ್ಚಿಗಳಿಗೆ ಗೂಡ ಕಟ್ಟುವುದಕ್ಕೆ ಸೂಕ್ತ ಜಾಗಗಳೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕಾಗಿಯೇ ಗುಬ್ಬಿಗಳ ಕೃತಕ ಗೂಡುಗಳನ್ನಾದರೂ ಬೆಕ್ಕುಗಳ ಕೈಗೆ ಸಿಗದಂತೆ ಮನೆಗಳ ಮೇಲೆ, ಗೋಡೆಗಳಲ್ಲಿ ತೂಗು ಹಾಕಿದರೆ ಒಂದೆರಡು ತಿಂಗಳುಗಳಲ್ಲಿ ಗುಬ್ಬಚ್ಚಿಗಳು ಬಂದು ಗೂಡು ಕಟ್ಟುತ್ತವೆ. ಪಂಜರದೊಳಗೆ ಕೇಳುವ ಚಿಲಿಪಿಲಿ ಶಬ್ದವನ್ನು ನೇರವಾಗಿ, ಮುಕ್ತವಾಗಿ ಕೇಳಬಹುದಾಗಿದೆ.