newsics.com
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕನ್ನಡ ನಟಿ ರನ್ಯಾ ರಾವ್ ಇದೀಗ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳ ವಿರುದ್ದ ಆರೋಪ ಮಾಡಿದ್ದಾರೆ. ಡಿಆರ್‌ಐ ಅಧಿಕಾರಿಗಳು ತನಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ, ಆಹಾರವನ್ನು ನಿರಾಕರಿಸಿದ್ದಾರೆ ಮತ್ತು ಖಾಲಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಆರ್‌ಐ ಯ ಹೆಚ್ಚುವರಿ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ, ರನ್ಯಾ ತನ್ನ ಮುಗ್ಧತೆಯನ್ನು ಸಮರ್ಥಿಸಿಕೊಂಡಿದ್ದಾರೆ, ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯಾಗಿರುವ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಅವರ ಸೊಂಟದ ಪಟ್ಟಿಯಿಂದರಿಂದ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಲಾಗಿತ್ತು.
ಪರಪ್ಪನ ಅಗ್ರಹಾರ ಜೈಲು ಮುಖ್ಯ ಸೂಪರಿಂಟೆಂಡೆಂಟ್ ಮೂಲಕ ಕಳುಹಿಸಲಾದ ಪತ್ರದಲ್ಲಿ, ವಿಮಾನದೊಳಗೆ ತನ್ನನ್ನು ಬಂಧಿಸಲಾಯಿತು ಮತ್ತು ವಿವರಿಸಲು ಅವಕಾಶ ನೀಡದೆ ಡಿಆರ್‌ಐ ತನ್ನನ್ನು ವಶಕ್ಕೆ ತೆಗೆದುಕೊಂಡಿತು ಎಂದು ರನ್ಯಾ ಹೇಳಿಕೊಂಡಿದ್ದಾರೆ.
ಪದೇ ಪದೇ ಹಲ್ಲೆ ನಡೆಸುತ್ತಿದ್ದರೂ, ಡಿಆರ್‌ಐ ಅಧಿಕಾರಿಗಳು ಸಿದ್ಧಪಡಿಸಿದ ಹೇಳಿಕೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ತೀವ್ರ ಒತ್ತಡದಲ್ಲಿ ಅಂತಿಮವಾಗಿ ಸುಮಾರು 50-60 ಟೈಪ್ ಮಾಡಿದ ಪುಟಗಳು ಮತ್ತು 40 ಖಾಲಿ ಬಿಳಿ ಹಾಳೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ರನ್ಯಾ ಹೇಳಿದ್ದಾರೆ.
“ನನ್ನನ್ನು ಬಂಧಿಸಿದ ಕ್ಷಣದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ, ನಾನು ಗುರುತಿಸಬಲ್ಲ ಅಧಿಕಾರಿಗಳು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು, 10-15 ಬಾರಿ ಕಪಾಳಮೋಕ್ಷ ಮಾಡಿದರು. ಪದೇ ಪದೇ ಹಲ್ಲೆ ನಡೆಸಲಾಗಿದ್ದರೂ, ಅವರು ಸಿದ್ಧಪಡಿಸಿದ ಹೇಳಿಕೆಗಳಿಗೆ ಸಹಿ ಹಾಕಲು ನಾನು ನಿರಾಕರಿಸಿದೆ” ಎಂದು ರನ್ಯಾ ಪತ್ರದಲ್ಲಿ ಆರೋಪಿಸಿದ್ದಾರೆ.
ರನ್ಯಾ ರಾವ್ ಜಾಮೀನು ನಿರಾಕರಣೆಯಾದ ಒಂದು ದಿನದ ಬಳಿಕ ಆಕೆ ಪತ್ರ ಬರೆದಿದ್ದಾರೆ. ಮೂರು ದಿನಗಳ ಕಾಲ ಡಿಆರ್ ಐ ಕಸ್ಟಡಿಯಲ್ಲಿದ್ದ ರನ್ಯಾರನ್ನು ಇದೀಗ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮಾರ್ಚ್ 3ರ ಸಂಜೆ 6.45ರಿಂದ ಮಾರ್ಚ್ 4ರ ಸಂಜೆ 7.50ರವರೆಗೆ ತನಗೆ ವಿಚಾರಣೆ ನೆಪದಲ್ಲಿ ಆಹಾರ ನೀಡದೆ, ನಿದ್ದೆಯೂ ಮಾಡಲು ಬಿಡದೆ ಹಿಂಸಿಸಿದ್ದಾರೆ ಎಂದು ರನ್ಯಾ ಆರೋಪಿಸಿದ್ದಾರೆ.
ಪ್ರಕಣದಲ್ಲಿ ಸಂಪೂರ್ಣ ಯು ಟರ್ನ್ ಹೊಡೆದಿರುವ ರನ್ಯಾ, ತನ್ನಿಂದ ಯಾವುದೇ ಚಿನ್ನ ಪತ್ತೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ದೆಹಲಿಯ ಕೆಲವು ವ್ಯಕ್ತಿಗಳು ಅಧಿಕಾರಿಗಳಂತೆ ನಟಿಸಿ, ಪ್ರಕರಣದ ಇತರ ಶಂಕಿತರನ್ನು ರಕ್ಷಿಸಲು ತನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿದ್ದಾರೆ.