newsics.com
ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ರಹಸ್ಯ ಬಗೆದಷ್ಟೂ ಬಯಲಾಗುತ್ತಿದೆ. ತನಿಖೆ ವೇಳೆ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.
ಈ ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಸಚಿವರಿಬ್ಬರ ಕೈವಾಡ ಇದೆ ಎಂದು ಬಿಜೆಪಿ ಬಾಂಬ್ ಹಾಕಿದ್ದು, ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಹೀಗಿರುವಾಗಲೇ ಡಿಆರ್ಐ (DRI) ಅಧಿಕಾರಿಗಳು ಫೈವ್ಸ್ಟಾರ್ ಹೋಟೆಲ್ ಏಟ್ರಿಯಾ ಮಾಲೀಕನ ತಮ್ಮನ ಮಗ ತರುಣ್ ರಾಜ್ ಎಂಬುವರನ್ನು ಬಂಧಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಅವರೊಂದಿಗೆ ಉದ್ಯಮಿ ಪುತ್ರ ತರುಣ್ ಹೆಸರು ಕೇಳಿಬಂದಿತ್ತು. ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ನಂತರ ಬಂಧಿಸಿದ್ದಾರೆ. ತರುಣ್ ರಾಜ್ ಅವರನ್ನು ಐದು ದಿನಗಳ ಕಾಲ ಡಿಆರ್ಐ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಇನ್ನು ನಟಿ ರನ್ಯಾ ರಾವ್ ಮತ್ತು ತರುಣ್ ರಾಜು ಇಬ್ಬರು ವರ್ಷಗಳಿಂದ ಸ್ನೇಹಿತರಾಗಿದ್ದರು. ರನ್ಯಾ ರಾವ್ ರಿಂದ ತರುಣ್ ರಾಜ್ ಚಿನ್ನ ತರಿಸಿಕೊಳ್ಳುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.
ರನ್ಯಾ ರಾವ್ ಚಿನ್ನದ ಸ್ಮಗ್ಲಿಂಗ್ ಬಗ್ಗೆ ಡಿಆರ್ಐ ಕೋರ್ಟ್ಗೆ ಇಂಚಿಂಚಾಗಿ ಮಾಹಿತಿ ನೀಡಿದೆ. ಬರೋಬ್ಬರಿ 12 ಕೋಟಿ 56 ಲಕ್ಷ ರೂ. ಮೌಲ್ಯದ ಚಿನ್ನ ಸ್ಮಗ್ಲಿಂಗ್ ಆಗಿದ್ದು, ಸ್ಮಗ್ಲಿಂಗ್ ಕೇಸ್ನಲ್ಲಿ ರನ್ಯಾ ‘ಮಾಸ್ಟರ್ ಮೈಂಡ್’ ಎಂದು ಉಲ್ಲೇಖ ಮಾಡಲಾಗಿದೆ.
ಈ ಮಧ್ಯೆ, ನಟಿ ರನ್ಯಾ ರಾವ್ಳನ್ನು ಕೋರ್ಟ್ 15 ದಿನ ನ್ಯಾಯಾಂಗ ವಶಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ರನ್ಯಾಳನ್ನು ಕಳುಹಿಸಲಾಗಿದೆ.
ರನ್ಯಾ ಟಿಶ್ಯೂ ಪೇಪರ್ ಆ್ಯಂಡ್ ಬ್ಯಾಂಡೇಜ್ ಬಳಸಿ ಚಿನ್ನ ಸಾಗಾಟ ಮಾಡಿದ್ದಾರೆ. ಚಿನ್ನ ಸಾಗಾಟ ಕೇಸ್ನಲ್ಲಿ ದೊಡ್ಡಮಟ್ಟದಲ್ಲಿ ಸದಸ್ಯರಿರುವ ಮಾಹಿತಿ ಇದೆ. ಚಿನ್ನದ ಪ್ರಕರಣದಲ್ಲಿ ಅನೇಕ ಜನ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಪ್ರೊಟೋಕಾಲ್ ಹೇಗೆ ದುರ್ಬಳಕೆ ಮಾಡಲಾಗಿದೆ ಎನ್ನುವುದನ್ನು ತಿಳಿಯಲು ರನ್ಯಾ ಫೋನ್ ರಿಟ್ರೀವ್ ಮಾಡಬೇಕಿದೆ ಎಂದು ಡಿಆರ್ಐ ಮಾಹಿತಿ ನೀಡಿದ್ದಾರೆ.
ರನ್ಯಾ ಮೊಬೈಲ್ ನೋಡುತ್ತಿದ್ದಂತೆ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ರನ್ಯಾ ಫೋನ್ನಲ್ಲಿ ರಾಜಕೀಯ ನಾಯಕರ ನಂಬರ್ ಪತ್ತೆ ಆಗಿದೆ. ಹಾಲಿ ಸಚಿವರು, ಮಾಜಿ ಸಚಿವರ ನಂಬರ್ ಗಳು ಪತ್ತೆ ಆಗಿದ್ದು, ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ರನ್ಯಾ ನಿರಂತರ ಸಂಪರ್ಕದಲ್ಲಿದ್ದರಂತೆ. ಇಷ್ಟೇ ಅಲ್ಲ, ಕೆಲ ಪೊಲೀಸ್ ಅಧಿಕಾರಿಗಳ ನಂಬರ್ ಗಳು ಕೂಡ ಪತ್ತೆ ಆಗಿವೆ. ಹೀಗಾಗಿ ರನ್ಯಾ ಕಾಲ್ ಡಿಟೇಲ್ಸ್ ಬಗ್ಗೆ ಡಿಆರ್ಐ ತಂಡ ಕೆದಕುತ್ತಿದೆ.
CDR ಪರಿಶೀಲನೆ ಮಾಡ್ತಿದ್ದು, ರನ್ಯಾ ಯಾರ ಯಾರ ಜತೆ ಮಾತನಾಡಿದ್ದಾರೆಂದು ಪರಿಶೀಲನೆ ಮಾಡುತ್ತಿದ್ದಾರೆ. ರನ್ಯಾ ಲ್ಯಾಪ್ಟಾಪ್ನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಮಾಹಿತಿಯೂ ಇದೆ. ಹೀಗಾಗಿ ಡಿಜಿಟಲ್ ಸಾಕ್ಷ್ಯದ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.