newsics.com
ಮೋಹಕತಾರೆ ಎಂದೇ ಖ್ಯಾತಿಯನ್ನು ಪಡೆದಿರುವ ರಮ್ಯಾ ಕನ್ನಡ ಚಿತ್ರರಂಗದ ಎವರ್ಗ್ರೀನ್ ಹಿರೋಯಿನ್. ರಮ್ಯಾ ಬಳಿಕ ಹಲವಾರು ನಟಿಯರು ಬಂದು ಹೋಗಿದ್ದರೂ ಸಹ ಯಾರಿಗೂ ರಮ್ಯಾಗೆ ಇರುವ ಕ್ರೇಜ್ ಮಾತ್ರ ಸಿಗಲಿಲ್ಲ.
ನಟಿ ರಮ್ಯಾ ಚಿತ್ರರಂಗದಿಂದ ದೂರಾಗಿ ದಶಕವೇ ಸಮೀಪಿಸುತ್ತಿದ್ದರೂ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿಯರಿಗಿಂತ ಹೆಚ್ಚಿನ ಕ್ರೇಜ್ ಹೊಂದಿದ್ದಾರೆ.
ಇನ್ನು ರಮ್ಯಾ 2016ರಲ್ಲಿ ತೆರೆಗೆ ಬಂದ ನಾಗರಹಾವು ಚಿತ್ರದಲ್ಲಿ ಕೊನೆಯ ಬಾರಿಗೆ ಬಣ್ಣ ಹಚ್ಚಿದ್ದರು. 2023ರಲ್ಲಿ ತೆರೆಗೆ ಬಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ರಮ್ಯಾ ಆಫರ್ಗಳಿಲ್ಲದೇ ಅಥವಾ ರಾಜಕೀಯಕ್ಕೆ ಹೋಗಿ ಬಂದ ಬಳಿಕ ಸಿನಿಮಾ ಬೇಡ ಎಂಬ ಕಾರಣಕ್ಕೆ ಸಿನಿಮಾದಿಂದ ದೂರ ಉಳಿದಿಲ್ಲ. ಇದಕ್ಕೆ ಕಾರಣ ಚಿತ್ರರಂಗದಲ್ಲಿರುವ ಸಂಭಾವನೆ ತಾರತಮ್ಯ ಎಂದು ಸ್ವತಃ ರಮ್ಯಾ ಅವರೇ ಹೇಳಿದ್ದಾರೆ.
ಹೌದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಮಾಧ್ಯಮದವರ ಜೊತೆ ಮಾತನಾಡಿದ ರಮ್ಯಾ “ಇಂದು ಸೂಪರ್ಸ್ಟಾರ್ಗಳಾಗಿರುವ ಹಲವರ ಜೊತೆ ನಾನು ಹಿಂದೆ ಸಿನಿಮಾ ಮಾಡಿದ್ದೇನೆ. ಆಗ ಅವರು ಅಷ್ಟೊಂದು ಫೇಮಸ್ ಇರಲಿಲ್ಲ ಹಾಗೂ ನನಗಿಂತ ಅವರಿಗೆ ಕಡಿಮೆ ಸಂಭಾವನೆ ಇತ್ತು. ಆದರೆ ಚಿತ್ರ ಹಿಟ್ ಆದ ಬಳಿಕ ನನಗಿಂತ ಅವರ ಸಂಭಾವನೆ 50 ಪಟ್ಟು ಹೆಚ್ಚಾಗಿತ್ತು. ನನ್ನ ಸಂಭಾವನೆ ಮಾತ್ರ ಕೇವಲ 5 ಪಟ್ಟು ಮಾತ್ರ ಹೆಚ್ಚು ಸಿಗುತ್ತಿತ್ತು. ನಾನು ಹಾಗೂ ನಾಯಕ ಒಟ್ಟಿಗೆ ಕೆಲಸ ಮಾಡ್ತೇವೆ. ಆದರೆ ಅವರು ಮಾತ್ರ ಮುಂದಿನ ದಿನಗಳಲ್ಲಿ ಕೋಟಿ ಕೋಟಿ ಪಡೆಯುತ್ತಾರೆ. ನಾನು ಮಾತ್ರ ಕೋಟಿ ಮುಟ್ಟಲು ಒದ್ದಾಡುವಂತಾಗಿದೆ. ಅದೇ ಕಾರಣಕ್ಕೆ ನಾನು ಚಿತ್ರರಂಗದಿಂದ ಹೊರನಡೆದೆ” ಎಂದು ರಮ್ಯಾ ತಿಳಿಸಿದ್ದಾರೆ.
ಇಲ್ಲಿ ರಮ್ಯಾ ಅವರ ಹೇಳಿಕೆಯನ್ನು ಗಮನಿಸಿದರೆ ರಮ್ಯಾ ಚಿತ್ರರಂಗ ಬಿಡುವುದಕ್ಕೂ ಮುನ್ನ ಅವರ ಜೊತೆ ನಟಿಸಿದ ಇಬ್ಬರು ಹೊಸ ನಟರೆಂದರೆ ಅದು ಲೂಸ್ ಮಾದ ಯೋಗಿ ಹಾಗೂ ಯಶ್. ಹೌದು, ಕೊನೆಯಲ್ಲಿ ಉಪೇಂದ್ರ ಹಾಗೂ ಶಿವರಾಜ್ಕುಮಾರ್ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದ ರಮ್ಯಾ ಹೇಳಿಕೆ ಈ ಇಬ್ಬರು ನಟರಿಗೂ ಅನ್ವಯಿಸುವುದಿಲ್ಲ.
ಆದರೆ ಲಕ್ಕಿ ಸಮಯದಲ್ಲಿ ಯಶ್ ಹಾಗೂ ಸಿದ್ಲಿಂಗು ಸಮಯದಲ್ಲಿ ಲೂಸ್ ಮಾದ ಯೋಗಿ ಅವರತ್ತ ನೋಡಿದರೆ ರಮ್ಯಾ ಹೇಳಿಕೆ ನೀಡಿದ್ದು ಈ ಇಬ್ಬರ ಬಗ್ಗೆನಾ ಎಂಬ ಅನುಮಾನ ಹುಟ್ಟದೇ ಇರಲಾರದು. ಏಕೆಂದರೆ ಯಶ್ ಹಾಗೂ ಯೋಗಿ ನಂತರ ಒಳ್ಳೆಯ ಸಂಭಾವನೆಗಳನ್ನು ಪಡೆದರು. ಅದರಲ್ಲಿಯೂ ವಿಶೇಷವಾಗಿ ಯಶ್.