newsics.com
ಚಾಮರಾಜನಗರ: ಪ್ರವಾಸಿ ತಾಣ ಬಂಡೀಪುರಕ್ಕೆ ರಿಲ್ಯಾಕ್ಸ್ ಮಾಡಲು ಬಂದಿದ್ದ ಕುಟುಂಬವೊಂದು ಅಪಹರಣಕ್ಕೊಳಗಾದ ಪ್ರಕರಣ ಸುಖಾಂತ್ಯಗೊಂಡಿದೆ. ಕಿಡ್ನಾಪ್ ಬಗ್ಗೆ ಎಸ್ಪಿ ಡಾ. ಬಿ ಟಿ ಕವಿತಾ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೂಲದ ನಿಶಾಂತ್ ಎಂಬುವರು ತನ್ನ ಪತ್ನಿ ಚಂದನಾ, 7 ವರ್ಷದ ಮಗನ ಜೊತೆ ಭಾನುವಾರದಂದು ಬಂಡಿಪುರದ ಕಂಟ್ರಿ ಕ್ಲಬ್ ರೆಸಾರ್ಟ್ನಲ್ಲಿ ಚೆಕ್ ಇನ್ ಆಗಿದ್ದರು. ಮಂಗಳವಾರದಂದು ಕುಟುಂಬ ಚೆಕ್ ಔಟ್ ಆಗಬೇಕಿತ್ತು. ಆದರೆ, ಸೋಮವಾರ ಮಧ್ಯಾಹ್ನ ರೆಸಾರ್ಟ್ನಿಂದ ಹೊರ ಹೋಗುತ್ತಿದ್ದಂತೆ ಅಟ್ಯಾಕ್ ಮಾಡಿದ ಕಿಡ್ನಾಪರ್ಸ್, ಮಗು ಸಮೇತ ದಂಪತಿಯನ್ನು ಅಪಹರಿಸಿದ್ದರು.
ವಾಚ್ ಟವರ್ನಲ್ಲಿದ್ದ ರೆಸಾರ್ಟ್ ಮ್ಯಾನೆಜರ್ ಗುರುರಾಜ ಆಚಾರ್ಯ ಇದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರಿಂದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಅಪಹರಣದ ಇಂಚಿಂಚು ಮಾಹಿತಿ ಪಡೆದಿದ್ದರು.
ಅಪಹರಣದ ಬೆನ್ನತ್ತಿದ್ದ ಪೊಲೀಸರು, ಸಿಸಿಟಿವಿ ಹಾಗೂ ಸಿಡಿಆರ್ ಮಾಹಿತಿ ಆಧರಿಸಿ 24 ತಾಸಲ್ಲೇ ದಂಪತಿ ಮತ್ತು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಎರಡು ಕಾರಲ್ಲಿ ಬಂದಿದ್ದ ಅಪಹರಣಕಾರರು ಮೂವರನ್ನು ಕಿಡ್ನಾಪ್ ಮಾಡಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಹಳ್ಳಿ ಗ್ರಾಮದ ತೋಟದಮನೆಯಲ್ಲಿ ಇರಿಸಿದ್ದನ್ನು ಪತ್ತೆಹಚ್ಚಿದ ಪೊಲೀಸರು ನಾಲ್ವರ ಹೆಡೆಮುರಿ ಕಟ್ಟಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಮಲ್ಲಿಕಾರ್ಜುನ್, ಈರಣ್ಣ, ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ಬಂಧಿತ ಆರೋಪಿಗಳಾಗಿದ್ದಾರೆ.
ಕಿಡ್ನಾಪ್ ಆದ ನಿಶಾಂತ್ ಬಳಿ ಫೇಕ್ ಐಡಿ – ಪ್ರಕರಣ ಮಾಸ್ಟರ್ ಮೈಂಡ್ ಪರಾರಿ: ಕಿಡ್ನಾಪ್ ಆದ ನಿಶಾಂತ್ ಬಳಿ ನಕಲಿ ಬಿಬಿಎಂಪಿ ಐಡಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ನಿಶಾಂತ್ ವಿರುದ್ಧವು ಕೇಸ್ ದಾಖಲು ಮಾಡಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಪುನೀತ್ ಹಾಗೂ ನಿಶಾಂತ್ ನಡುವೆ ಹಣಕಾಸಿನ ವಿಚಾರಕ್ಕೆ ಈ ಕಿಡ್ನಾಪ್ ಆಗಿದ್ದು, ಮೇಲ್ನೋಟಕ್ಕೆ ದೃಢವಾಗಿದೆ. ಪುನೀತ್ ಸೇರಿದಂತೆ ಸ್ನೇಹಿತ್, ಭೀಮನಗೌಡ ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.