newsics.com
ಬಳ್ಳಾರಿ: ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ಕಪ್ಪಗಲ್ಲು ಗ್ರಾಮದ ಖಾಸಗಿ ಫಾರ್ಮ್‌ನಲ್ಲಿ ಕಳೆದ ಮೂರು ದಿನಗಳಲ್ಲಿ ಎಂಟು ಸಾವಿರ ಕೋಳಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೂರ್‍ನಾಲ್ಕು ದಿನಗಳ ಹಿಂದಷ್ಟೇ ತೋರಣಗಲ್ಲು ಬಳಿಯ ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿ ಪ್ರತಿದಿನ 30-40ರಂತೆ ಸರಿ ಸುಮಾರು ಎರಡು ಸಾವಿರ ಕೋಳಿಗಳು ಸಾವನ್ನಪ್ಪಿದ್ದವು.
ಅನುಮಾನ ಮೂಡಿ ಸ್ಯಾಂಪಲ್‌ನ್ನು ಭೋಪಾಲ್ ಲ್ಯಾಬ್‌ಗ ಕಳುಹಿಸಿದಾಗ “ಹಕ್ಕಿಜ್ವರ’ ಇರುವುದು ದೃಢಪಟ್ಟಿತ್ತು. ಇದಾಗಿ ಎರಡು ದಿನ ಕಳೆಯುವಷ್ಟರಲ್ಲೇ ಇದೀಗ ಕಪ್ಪಗಲ್ಲು ಗ್ರಾಮದ ರವಿ ಎನ್ನುವವರಿಗೆ ಸೇರಿದ ಖಾಸಗಿ ಕೋಳಿ ಫಾರ್ಮ್‌ನಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸುಮಾರು ಎಂಟು ಸಾವಿರ ಕೋಳಿಗಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ.
ಮೇಲ್ನೋಟಕ್ಕೆ “ಹಕ್ಕಿಜ್ವರ’ ತಗುಲಿರುವ ಅನುಮಾನ ವ್ಯಕ್ತವಾಗುತ್ತಿದೆ. ಸ್ಯಾಂಪಲ್ ಸಂಗ್ರಹಿಸಿ ಭೋಪಾಲ್‌ನ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಸೆಕ್ಯುರಿಟಿ ಅನಿಮಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಹನುಮಂತಪ್ಪ ನಾಯಕ್ ಕಾರ್‌ಬಾರಿ ಸ್ಪಷ್ಟಪಡಿಸಿದ್ದಾರೆ.
ಐವರು ವೈದ್ಯರು ಪಿಪಿಇ ಕಿಟ್ ಧರಿಸಿ ತೆರಳಿ ಫಾರ್ಮ್‌ನಲ್ಲಿ ಸತ್ತಿರುವ ಎಂಟು ಸಾವಿರ ಕೋಳಿಗಳನ್ನು ಪರಿಶೀಲಿಸಿದ್ದು, ವೈಜ್ಞಾನಿಕ ಪದ್ಧತಿಯಲ್ಲಿ ಗುಂಡಿ ಅಗೆದು ಸತ್ತ ಕೋಳಿಗಳನ್ನು ಹಾಕಿ ಮುಚ್ಚಲಾಗಿದೆ. ಜೊತೆಗೆ ಫಾರ್ಮ್‌ನವರಿಗೆ ಜಾಗೃತಿ ಸಹ ಮೂಡಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಫಾರ್ಮ್ನಿಂದ ಒಂದು ಕಿಮೀ ವ್ಯಾಪ್ತಿಯ ಸೋಂಕಿತ ವಲಯದಲ್ಲಿ ಕಪ್ಪಗಲ್ಲು ಗ್ರಾಮ ಬರಲಿದ್ದು, ಅಲ್ಲಿ ಸ್ಯಾನಿಟೈಜೇಷನ್ ಮಾಡಿಸಲಾಗುತ್ತಿದೆ. 10 ಕಿ.ಮೀ. ವ್ಯಾಪ್ತಿಯ ಶಂಕಿತ ವಲಯದಲ್ಲಿ ಸಾಕು ಕೋಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.