newsics.com
ಅಂಗೈ ಹಾಗೂ ಕೈ ಬೆರಳುಗಳು ಮನುಷ್ಯನ ಅಗತ್ಯ ಕೆಲಸಗಳಿಗೆ ಸಹಾಯ ಮಾಡುವ ಅಂಗ. ಕೈಬೆರಳುಗಳು ಸರಿಯಾಗಿ ಇಲ್ಲದೆ ಹೋದರೆ ನಿತ್ಯದ ಕೆಲಸಗಳನ್ನು ಮಾಡಲು ಸಾಕಷ್ಟು ಕಷ್ಟಪಡಬೇಕಾಗುವುದು. ಕೈಬೆರಳುಗಳು ಹಾಗೂ ಅಂಗೈ ಎನ್ನುವುದು ಮನುಷ್ಯನಿಗೆ ಅತ್ಯಗತ್ಯವಾದ ಅಂಗ. ಇದು ವ್ಯಕ್ತಿಯ ಅಗತ್ಯತೆಯ ಜೊತೆಗೆ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬರ ಕೈ ಬೆರಳು ವಿಭಿನ್ನ ಬಗೆಯಲ್ಲಿ ಇರುತ್ತವೆ. ಕೈಬೆರಳಿನ ಉದ್ದ, ಅಗಲ ಹಾಗೂ ಕೈಬೆರಳ ಕೆಳಭಾಗದಲ್ಲಿ ಇರುವ ಪರ್ವಗಳು ವಿವಿಧ ಬಗೆಯ ಭವಿಷ್ಯವನ್ನು ಸೂಚಿಸುತ್ತವೆ ಎಂದು ಹಸ್ತಮುದ್ರಿಕೆಯ ಜ್ಯೋತಿಷ್ಯ ತಿಳಿಸುವುದು. ವ್ಯಕ್ತಿಯ ಕೈಬೆರಳನ್ನು ನೋಡುವುದರ ಮೂಲಕ ಅವರ ವ್ಯಕ್ತಿತ್ವ ಹಾಗೂ ಸ್ವಭಾವವನ್ನು ಸುಲಭವಾಗಿ ತಿಳಿಯಬಹುದು.
- ಬಲಗೈಯ ಹೆಬ್ಬೆರಳು ಎಡಗೈಯ ಹೆಬ್ಬೆರಳಿನ ಮೇಲೆ ಇದ್ದರೆ : ಎರಡು ಕೈಯನ್ನು ಜೋಡಿಸಿದಾಗ ಬಲಗೈಯ ಹೆಬ್ಬೆರಳು ಎಡಗೈಯ ಹೆಬ್ಬೆರಳಿನ ಮೇಲೆ ಇದ್ದರೆ ಅಂತಹ ಜನರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳಲ್ಲಿ ನಾಯಕತ್ವದ ಗುಣ ಹೆಚ್ಚಿದ್ದು, ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಜನರು ತುಂಬಾನೇ ಮುಂದಾಲೋಚನೆಯುಳ್ಳವರು. ಹೀಗಾಗಿ ವ್ಯವಹಾರಗಳಲ್ಲಿ ಲಾಭ ನಷ್ಟಗಳನ್ನು ಮೊದಲೇ ಊಹಿಸುವ ಸಾಮರ್ಥ್ಯ ಹೆಚ್ಚಿರುತ್ತದೆ. ತಮ್ಮ ಜೀವನದ ರಹಸ್ಯಗಳನ್ನು ಯಾರಿಗೂ ಹೇಳದೇ ತಮ್ಮಲ್ಲೇ ಕಾಪಾಡಿಕೊಳ್ಳುತ್ತಾರೆ.
- ಎಡಗೈಯ ಹೆಬ್ಬೆರಳು ಬಲಗೈಯ ಹೆಬ್ಬೆರಳಿನ ಮೇಲೆ ಇದ್ದರೆ : ಎರಡು ಕೈ ಜೋಡಿಸಿದಾಗ ಹೆಬ್ಬೆರಳು ಈ ರೀತಿಯಿದ್ದರೆ ಈ ಜನರನ್ನು ಬಹಳ ಅಪರೂಪವೆಂದು ಪರಿಗಣಿಸಲಾಗುತ್ತದೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಹಾಗೂ ಎಲ್ಲಾ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ದಯಾಳು ಗುಣ ಹೊಂದಿದ್ದು ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇವರು ತನ್ನ ಸುತ್ತಮುತ್ತಲಿನವರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಾರೆ. ಕಷ್ಟ ಎನ್ನುವವರ ಜೊತೆಗೆ ಈ ವ್ಯಕ್ತಿಗಳು ಸದಾ ಬೆನ್ನ ಹಿಂದೆ ನಿಲ್ಲುತ್ತಾರೆ. ಸಲಹೆ ಸೂಚನೆ ನೀಡುವುದರಲ್ಲಿ ಈ ವ್ಯಕ್ತಿಗಳು ಒಂದು ಹೆಜ್ಜೆ ಮುಂದೆ ಇರುತ್ತಾರೆ.
- ಎರಡು ಕೈಯ ಹೆಬ್ಬೆರಳು ನೇರವಾಗಿದ್ದರೆ : ಎರಡು ಕೈ ಜೋಡಿಸಿದಾಗ ಎರಡು ಕೈಯ ಹೆಬ್ಬೆರಳು ನೇರವಾಗಿದ್ದರೆ ಅಂತಹ ವ್ಯಕ್ತಿಗಳು ಎಲ್ಲರ ಮಾತಿಗೂ ಕಿವಿಗೊಡುತ್ತಾರೆ. ಇವರಲ್ಲಿ ನಾಯಕತ್ವ ಗುಣ ಹೆಚ್ಚಿರುತ್ತದೆ. ಪ್ರಾಮಾಣಿಕರಾಗಿದ್ದು ತಮ್ಮ ನೇರವಾದ ಮಾತಿನಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಇತರರ ಅಭಿಪ್ರಾಯಗಳನ್ನು ಗೌರವಿಸುತ್ತಾರೆ. ಯಾವುದೇ ಕೆಲಸ ಕಾರ್ಯಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಕಾಣುತ್ತಾರೆ. ಈ ವ್ಯಕ್ತಿಗಳಲ್ಲಿ ಸ್ಪಷ್ಟ ಮತ್ತು ಪ್ರಾಮಾಣಿಕ ಸಂವಹನವು ಎದ್ದು ಕಾಣುತ್ತದೆ. ಸಣ್ಣಪುಟ್ಟ ವಿಷಯಗಳಿಗೆ ಹೆಚ್ಚು ಗಮನ ಹರಿಸುತ್ತಾರೆ. ಒತ್ತಡದ ಸಂದರ್ಭಗಳಲ್ಲಿಯೂ ನಿರಾಳವಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ತಮ್ಮ ಜೊತೆಗಿರುವವರಿಗೆ ನಿಷ್ಠೆ ಮತ್ತು ಬದ್ಧತೆಯಿಂದ ಇರುತ್ತಾರೆ.