newsics.com
ಹಾಸನ: ಹಾಸನದ ಜೀವನದಿ ಹೇಮಾವತಿಗೆ ಅಡ್ಡಲಾಗಿ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸೇತುವೆ ಈಗ ಕುಸಿದುಬೀಳುವ ಹಂತಕ್ಕೆ ತಲುಪಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಅಪಾಯದ ಸ್ಥಿತಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಕೆಲವು ತಿಂಗಳ ಹಿಂದಿನವರೆಗೂ ಇದೇ ಸೇತುವೆ ಮೇಲೆ ನಿತ್ಯವೂ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಾಹನಗಳು ಓಡಾಡುತ್ತಿದ್ದವು. ನೂರಾರು ಟನ್ ಭಾರದ ಸರಕು ಹೊತ್ತ ವಾಹನಗಳಿಗೂ ಇದೇ ಸೇತುವೆ ಆಸರೆಯಾಗಿತ್ತು. ಆದರೆ, ಬರೊಬ್ಬರಿ 23 ವರ್ಷಗಳ ಹಿಂದೆ ಒಂದಷ್ಟು ದುರಸ್ತಿ ಕಂಡಿದ್ದ ಈ ಸೇತುವೆಯನ್ನು ಆ ನಂತರ ದುರಸ್ತಿ ಮಾಡದಿರುವುದು ಆತಂಕ ಸೃಷ್ಟಿಮಾಡಿದೆ.
ಸೇತುವೆ ನಿರ್ಮಿಸುವಾಗ ಭೂಮಿ ಆಳದಲ್ಲಿ ಬಗೆದು ನಿರ್ಮಿಸಿದ್ದ ಪಿಲ್ಲರ್ನ ತಳಪಾಯವೇ ಈಗ ಮೇಲೆ ಬಂದಿದೆ, ಸೇತುವೆಯ ಪಿಲ್ಲರ್ಗಳು ಬಿರುಕು ಬಿಟ್ಟು ಅಡಿಪಾಯದ ಕಲ್ಲುಗಳು ಉದುರಿ ಬೀಳುತ್ತಿವೆ.
ಸೇತುವೆ ಮೇಲೆ ವಾಹನಗಳು ಸಂಚಾರ ಮಾಡಿದಾಗ ಸೇತುವೆ ಅದರುತ್ತಿದೆ. ಪ್ರತೀ ವರ್ಷದ ಮಳೆಗಾಲದಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತದೆ. ಈ ವರ್ಷದ ಮಳೆಗಾಲ ಆರಂಭಕ್ಕೂ ಮುನ್ನ ಸೇತುವೆ ದುರಸ್ಥಿ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಸೇತುವೆ ಶಿಥಿಲಗೊಂಡು ಅಪಾಯದ ಸೂಚನೆ ನೀಡುತ್ತಿದೆ. ಮಳೆಗಾಲದಲ್ಲಿ ಭೋರ್ಗಗರೆದು ಹರಿಯುವ ಹೇಮಾವತಿ ನದಿಯಿಂದ ಸೇತುವೆಗೆ ಅಪಾಯ ಆಗುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.