newsics.com
ನವದೆಹಲಿ: ಸಿಗರೇಟ್ ರೇಟ್ ಮತ್ತಷ್ಟು ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ. ಸಿಗರೇಟ್ ಅಷ್ಟೇ ಅಲ್ಲದೆ ತಂಬಾಕು ಸೇರಿದಂತೆ ಕೆಲವು ವಸ್ತುಗಳ ಮೇಲೆ ಭಾರೀ ತೆರಿಗೆ ವಿಧಿಸಲು ಕೇಂದ್ರ ಸಜ್ಜಾಗಿದೆ. ಮುಂಬರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ, ಸಿಗರೇಟ್ ಸೇರಿದಂತೆ ಕೆಲ ತಂಬಾಕು ಉತ್ಪನ್ನಗಳ ಮೇಳೆ ಹೊಸ ತೆರಿಗೆ ಸ್ಲ್ಯಾಬ್ ಶುರು ಮಾಡಲು ಕೇಂದ್ರ ಜಿಎಸ್ಟಿ ಕೌನ್ಸಿಲ್ ಮುಂದಾಗಿದೆ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಶೇ. 25ರಷ್ಟಿರುವ ಜಿಎಸ್ಟಿಯನ್ನು ಶೇ. 40ಕ್ಕೆ ಹೆಚ್ಚಿಸುವ ಇರಾದೆ ಇದೆ ಎನ್ನಲಾಗಿದೆ. ಸರ್ಕಾರಗಳಿಗೆ ಆದಾಯ ಕೊರತೆ ಬಂದಾಗೆಲ್ಲಾ, ಅಥವಾ ಹೆಚ್ಚಿನ ಆದಾಯ ಬೇಕೆನಿಸಿದಾಗೆಲ್ಲಾ ಮೊದಲು ದೃಷ್ಟಿ ನೆಡವುದು ಧೂಮಪಾನಿ ಮತ್ತು ಮದ್ಯಪಾನಿಗಳತ್ತಲೇ. ಹೀಗಾಗಿ, ಸರ್ಕಾರ ಈ ಕ್ರಮ ತೆಗೆದುಕೊಂಡರೆ ಅಚ್ಚರಿ ಇಲ್ಲ.
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹ ತುಸು ಕಡಿಮೆ ಆಗುವ ನಿರೀಕ್ಷೆ ಇದೆ. ಹಾಗೆಯೇ, ತಂಬಾಕು ಉತ್ಪನ್ನಗಳ ಮೇಲಿನ ಕಾಂಪೆನ್ಸೇಶನ್ ಸೆಸ್ ಅವಧಿ ಮುಂದಿನ ವರ್ಷ ಮುಗಿಯುತ್ತದೆ. ಇದರಿಂದಲೂ ಸರ್ಕಾರಕ್ಕೆ ತೆರಿಗೆ ಆದಾಯ ಸಂಕುಚಿತಗೊಳ್ಳಬಹುದು. ಇದನ್ನು ಸರಿದೂಗಿಸಲು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ಟಿ ಹೆಚ್ಚಿಸಲು ಸರ್ಕಾರ ಹೊರಟಿದೆ.
ಮನುಷ್ಯರ ಆರೋಗ್ಯಕ್ಕೆ ಮಾರಕವಾಗುವ ತಂಬಾಕು ಮತ್ತು ಮದ್ಯ ಉತ್ಪನ್ನಗಳನ್ನು ಸಿನ್ ಗೂಡ್ ಅಥವಾ ಪಾಪದ ಉತ್ಪನ್ನಗಳೆಂದು ಪರಿಗಣಿಸಲಾಗುತ್ತದೆ. ಈ ಸಿನ್ ಗೂಡ್ಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಜನರು ಅವುಗಳನ್ನು ಖರೀದಿಸುವುದಕ್ಕೆ ಕಡಿವಾಣ ಹಾಕಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಪ್ರಕಾರ ಸಿಗರೇಟುಗಳಿಗೆ ಶೇ 75ರಷ್ಟು ತೆರಿಗೆ ಇರಬೇಕು.
ಭಾರತದಲ್ಲಿ ಶೇ. 28 ಜಿಎಸ್ಟಿ ಸೇರಿ, ಸಿಗರೇಟ್ಗೆ ಇರುವ ಒಟ್ಟು ತೆರಿಗೆ ಶೇ. 53 ಇದೆ. ಶೇ. 5ರಷ್ಟು ಕಾಂಪೆನ್ಸೇಶನ್ ಸೆಸ್ ಕೂಡ ಇದರಲ್ಲಿ ಒಳಗೊಂಡಿದೆ. ಅಬಕಾರಿ ಸುಂಕ, ರಾಷ್ಟ್ರೀಯ ವಿಪತ್ತು ನಿಧಿ ಸುಂಕವೂ ಸೇರಿ ಒಟ್ಟು ತೆರಿಗೆ ಶೇ. 52.7 ಆಗುತ್ತದೆ. ಈಗ 2026, ಮಾರ್ಚ್ 31ರವರ ಬಳಿಕ ಕಾಂಪೆನ್ಸೇಶನ್ ಸೆಸ್ ಇರೊಲ್ಲ. ಜಿಎಸ್ಟಿಯನ್ನು ಶೇ. 40ಕ್ಕೆ ಏರಿಸಿದರೆ, ಒಟ್ಟು ತೆರಿಗೆ ಶೇ. 60ರ ಆಸುಪಾಸಿಗೆ ಬರುತ್ತದೆ.