newsics.com
ಭೂಮಿಯ ಏಕೈಕ ಶಕ್ತಿಯ ಮೂಲ ಎನಿಸಿಕೊಂಡಿರುವ ಸೂರ್ಯನಷ್ಟೇ ಶಕ್ತಿಯನ್ನು ಒದಗಿಸಬಲ್ಲಂತಹ ಕೃತಕ ಸೂರ್ಯನನ್ನು ಸೃಷ್ಟಿ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ.
ಪ್ರಸ್ತುತ ಚೀನ ತಯಾರು ಮಾಡಿರುವ “ಕೃತಕ ಸೂರ್ಯ’, ರಷ್ಯಾ ಹಾಗೂ ಐರೋಪ್ಯ ಒಕ್ಕೂಟ ತಯಾರು ಮಾಡುತ್ತಿರುವ “ಕೃತಕ ಸೂರ್ಯ’ಗಳು ಒಂದು ಮಾದರಿಯ ಅಣುಸ್ಥಾವರಗಳಾಗಿವೆ. ಪ್ರಸ್ತುತ ಶಕ್ತಿ ಉತ್ಪಾದನೆಗೆ ಬಳಕೆ ಮಾಡುತ್ತಿರುವ ಅಣುಸ್ಥಾವರಗಳ ಮಾದರಿಯಲ್ಲೇ ಇವು ಇದ್ದರೂ ಇಲ್ಲಿ ಸೂರ್ಯನಲ್ಲಿ ಉತ್ಪಾದನೆಯಾಗುವಂತೆ ಶಕ್ತಿ ಉತ್ಪಾದನೆಯಾಗುತ್ತದೆ. ಹೀಗಾಗಿ ಇವುಗಳನ್ನು ಕೃತಕ ಸೂರ್ಯ, ಭೂಮಿ ಮೇಲಿನ ಸೂರ್ಯ ಎಂದು ಕರೆಯಲಾಗುತ್ತದೆ.
ಪ್ರಸ್ತುತ ಭೂಮಿಯ ಮೇಲಿರುವ ಎಲ್ಲ ಅಣುಸ್ಥಾವರಗಳಲ್ಲಿ ವಿದಳನ ಕ್ರಿಯೆಯ ಮೂಲಕ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ. ಅಂದರೆ ಪರಮಾಣುವೊಂದನ್ನು ಒಡೆಯುವ ಮೂಲಕ ಭಾರೀ ಪ್ರಮಾಣದ ಶಕ್ತಿಯನ್ನು ಉತ್ಪಾದನೆ ಮಾಡಲಾಗುತ್ತದೆ. ವಿದಳನ ಕ್ರಿಯೆಯನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ಆದರೆ ಇದು ಅಪಾಯಕಾರಿ ಕೆಲಸವಾಗಿದ್ದು, ಇದರಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ಇಡೀ ಭೂಮಿಯನ್ನು ನಾಶ ಮಾಡುವಷ್ಟು ಅಪಾಯಕಾರಿಯಾಗಿದೆ. ಆದರೆ ಸೂರ್ಯನಲ್ಲಿ ಶಕ್ತಿ “ಸಮ್ಮಿಳನ’ ಕ್ರಿಯೆಯ ಮೂಲಕ ಉತ್ಪಾದನೆಯಾಗುತ್ತದೆ. 2 ಪರಮಾಣುಗಳು ಕೂಡಿಕೊಳ್ಳುವ ಮೂಲಕ ಶಕ್ತಿ ಉತ್ಪಾದನೆಯಾಗುತ್ತದೆ. ಸೂರ್ಯನಲ್ಲಿ ಹೈಡ್ರೋಜನ್ ಅಣುಗಳ ಸಮ್ಮಿಳನದಿಂದ ಶಕ್ತಿ ಉತ್ಪಾದನೆಯಾಗುತ್ತದೆ. ವಿದಳನ ಕ್ರಿಯೆಯಲ್ಲಿ ಅಣುಗಳು ನಾಶವಾಗುತ್ತವೆ. ಹೀಗಾಗಿ ಒಮ್ಮೆ ಶಕ್ತಿ ಉತ್ಪಾದನೆಯಾದ ಬಳಿಕ ತ್ಯಾಜ್ಯ ಸೃಷ್ಟಿಯಾಗುತ್ತದೆ. ಸಮ್ಮಿಳನದಲ್ಲಿ ಅಣುಗಳು ನಾಶವಾಗದ ಕಾರಣ ಇಲ್ಲಿ ಶಕ್ತಿ ಉತ್ಪಾದನೆ ನಿರಂತವಾಗಿರುತ್ತದೆ.
ಕೃತಕ ಸೂರ್ಯನ ಸೃಷ್ಟಿಯಲ್ಲಿ ಚೀನ ಯಶಸ್ವಿ
ಸಮ್ಮಿಳನ ಕ್ರಿಯೆಯನ್ನು ಭೂಮಿಯ ಮೇಲೆ ನಡೆಸಲು 1910ರಿಂದ ವಿಜ್ಞಾನಿಗಳು ನಡೆಸುತ್ತಿದ್ದ ಪ್ರಯೋಗಗಳು 2000ದಲ್ಲಿ ಫಲ ಕೊಟ್ಟವು. ಮೊದಲ ಬಾರಿ 2000ದಲ್ಲಿ ಯುರೋಪ್‌ನ ವಿಜ್ಞಾನಿಯೊಬ್ಬರು ಸಮ್ಮಿಳನ ಕ್ರಿಯೆ ಮಾಡಿಸುವಲ್ಲಿ ಯಶಸ್ಸು ಸಾಧಿಸಿದರು. ಇದು ಭೂಮಿಯ ಮೇಲೆ ಸೂರ್ಯನನ್ನು ಸೃಷ್ಟಿ ಮಾಡುವುದಕ್ಕೆ ನಾಂದಿಯಾಯಿತು. ಚೀನದ ವಿಜ್ಞಾನಿಗಳು “ಎಕ್ಸ್ಪೆರಿಮೆಂಟಲ್ ಅಡ್ವಾನ್ಸ್ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್’ ಹೆಸರಿನ ಪ್ರಯೋಗವನ್ನು 2006ರಲ್ಲಿ ಆರಂಭಿಸಿ ಕೃತಕ ಸೂರ್ಯನ ಸೃಷ್ಟಿ ಆರಂಭಿಸಿದರು. ಇದಕ್ಕಾಗಿ ಶಕ್ತಿಶಾಲಿ ಅಣುವಿದ್ಯುತ್ ಸ್ಥಾವರವನ್ನು ಸ್ಥಾಪನೆ ಮಾಡಲಾಗಿದ್ದು, ಅಣುಗಳ ಸಮ್ಮಿಳನ ಮಾಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಇದನ್ನು ಚೀನದ ಹಫೇಯ್ ನಗರದಲ್ಲಿ ನಿರ್ಮಾಣ ಮಾಡಲಾಗಿದೆ.
ಟೋಕಾಮಾಕ್‌ನಲ್ಲಿ ಶಕ್ತಿ ಉತ್ಪಾದನೆ ಹೇಗೆ?
ಚೀನದ ವಿಜ್ಞಾನಿಗಳು ತಯಾರು ಮಾಡಿರುವ ಟೋಕಾಮಾಕ್‌ನಲ್ಲಿ ಮೊದಲಿಗೆ ಜಲಜನಕದ ಅಣುವನ್ನು ಬಿಸಿ ಮಾಡಿ ಪ್ಲಾಸ್ಲಾ ಸ್ಥಿತಿಗೆ ತಲುಪಿಸಲಾಗುತ್ತದೆ. ಇದು ನಿಗದಿತ ಶಾಖದ ಮಟ್ಟವನ್ನು ತಲುಪುತ್ತಿದ್ದಂತೆ ಇಲ್ಲಿ ಸಮ್ಮಿಳನ ಆರಂಭವಾಗುತ್ತದೆ. ಆದರೆ ಇದನ್ನು ನಿರಂತರವಾಗಿ ಕಾಪಾಡಿಕೊಳ್ಳುವುದು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. 1000 ಸೆಕೆಂಡ್‌ಗಳ ಕಾಲ ಮಾತ್ರ ಸಮ್ಮಿಳನ ನಡೆಸಲು ಸಾಧ್ಯವಾಗಿದೆ. ಇದು ನಿರಂತರವಾಗಿ ನಡೆದರೆ ಯಾವುದೇ ಮಾಲಿನ್ಯವಿಲ್ಲದೇ ಭಾರೀ ಶಕ್ತಿ ಉತ್ಪಾದನೆ ಮಾಡಬಹುದಾಗಿದೆ.
ನಿರಂತರವಾದ ವಿದ್ಯುತ್ ಉತ್ಪಾದನೆ ಗುರಿ
ಕೃತಕ ಸೂರ್ಯನಿಂದ ಉತ್ಪಾದನೆಯಾಗುವ ಶಕ್ತಿಯ ಮೂಲಕ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡು ವುದು ವಿಜ್ಞಾನಿಗಳ ಗುರಿಯಾಗಿದೆ. ಸಮ್ಮಿಳನ ನಡೆಯುವ ಅಣುಸ್ಥಾವರದಲ್ಲಿ ಉತ್ಪಾದನೆಯಾಗುವ ಶಕ್ತಿಯನ್ನು ಅಂದರೆ ಶಾಖವನ್ನು ಪೈಪ್‌ಗ್ಳ ಮೂಲಕ ಹಾಯಿಸಿ ನೀರು ಕಾಯಿಸಲಾಗುತ್ತದೆ. ಇದರಿಂದ ಸೃಷ್ಟಿಯಾಗುವ ಹಬೆಯನ್ನು ಟರ್ಬೈನ್‌ಗಳಿಗೆ ಹಾಯಿಸುವ ಮೂಲಕ ಅವು ತಿರುಗುವಂತೆ ಮಾಡಿ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ಗ್ರಿಡ್‌ಗಳಿಗೆ ನೀಡಲಾಗುತ್ತದೆ. ಬಳಿಕ ಬಿಸಿಯಾಗಿರುವ ಹೀಲಿಯಂ ಅನಿಲವನ್ನು ತಣಿಸುವ ಮೂಲಕ ಅದನ್ನು ನೀರಾಗಿ ಪರಿವರ್ತಿಸಲಾ ಗುತ್ತದೆ.
10 ಕೋಟಿ ಡಿಗ್ರಿ ಸೆ. ತಾಪದಲ್ಲಿ ಉರಿದು ದಾಖಲೆ
ಚೀನ ಜ.20ರಂದು ನಡೆಸಿದ ಪ್ರಯೋಗದ ಸಮಯದಲ್ಲಿ ಕೃತಕ ಸೂರ್ಯ 17 ನಿಮಿಷಗಳ ಕಾಲ 10 ಕೋಟಿ ಡಿಗ್ರಿ ಸೆ. ತಾಪದಲ್ಲಿ ಉರಿದು ದಾಖಲೆ ನಿರ್ಮಿಸಿದೆ. ಇದು ಸೂರ್ಯನಲ್ಲಿ ಉತ್ಪಾದನೆಯಾಗುವ ಶಕ್ತಿಗಿಂತ 8 ಪಟ್ಟು ಅಧಿಕ. ಇಷ್ಟು ಪ್ರಮಾಣದ ಶಾಖ ಉತ್ಪಾದನೆ ಮಾಡಲು ಕಲ್ಲಿದ್ದಲು ಸ್ಥಾವರಗಳಿಂದ ಸಾಧ್ಯವೇ ಇಲ್ಲ. ಸಮ್ಮಿಳನ ಕೇಂದ್ರಗಳಲ್ಲಿ 1 ದಿನದಲ್ಲಿ 1 ಕೆ.ಜಿ. ಇಂಧನ ಬಳಸಿಕೊಂಡು ಶಕ್ತಿ ಉತ್ಪಾದನೆಗೆ ತೊಡಗಿದರೆ ಇದು 1,500 ಮೆಗಾ ವ್ಯಾಟ್ ವಿದ್ಯುತ್ತನ್ನು ಉತ್ಪಾದನೆ ಮಾಡಬಹುದು. ಇಷ್ಟು ವಿದ್ಯುತ್ ಉತ್ಪಾದನೆ ಮಾಡಲು 10,000 ಟನ್ ಕಲ್ಲಿದ್ದಲು ಸುಡಬೇಕಾಗುತ್ತದೆ.
ಕೃತಕ ಸೂರ್ಯನಿಂದ ತಯಾರು ಮಾಡಲಾಗುವ ವಿದ್ಯುತ್ತನ್ನು 2030ರಿಂದ ಮಾರಾಟ ಮಾಡುವುದಾಗಿ ಚೀನದ ವಿಜ್ಞಾನಿಗಳು ಘೋಷಣೆ ಮಾಡಿದ್ದಾರೆ. ಅಲ್ಲದೇ ಇಡೀ ಬೆಂಗಳೂರು ನಗರಕ್ಕೆ ಬೇಕಾದ ವಿದ್ಯುತ್ ಒದಗಿಸಲು ಮನೆಗಾತ್ರದ ಸಮ್ಮಿಳನ ವಿದ್ಯುತ್ ಸ್ಥಾವರ ಸಾಕು ಎಂದು ಅವರು ಹೇಳಿದ್ದಾರೆ. ಹೀಗಾಗಿ ಇದು ಭವಿಷ್ಯದ ಇಂಧನ ಮೂಲ ಎನಿಸಿಕೊಂಡಿದೆ. ದಿನಕಳೆದಂತೆ ವಿಜ್ಞಾನಿಗಳು ಸಮ್ಮಿಳನದಲ್ಲಿ ಯಶಸ್ಸು ಸಾಧಿಸಿದರೆ ಇದನ್ನು ವಾಹನಗಳ ಇಂಧನವಾಗಿಯೂ ಬಳಕೆ ಮಾಡಿಕೊಳ್ಳುವಂತೆ ಪರಿವರ್ತನೆ ಮಾಡಬಹುದಾಗಿದೆ. ಶೂನ್ಯ ಕಾರ್ಬನ್ ಪರಿಸರವನ್ನು ನಿರ್ಮಾಣ ಮಾಡುವ ಗುರಿಯನ್ನು ಸಾಧಿಸಲು ಇದು ಸಹಕಾರ ಒದಗಿಸಲಿದೆ.
ಕೃತಕ ಸೂರ್ಯನಿಂದಾಗುವ ಉಪಯೋಗ
1.ಸಮ್ಮಿಳನ ಕ್ರಿಯೆಯ ಮೂಲಕ ಶಕ್ತಿ ಉತ್ಪಾನೆಯಾಗುವುದರಿಂದ ಪ್ರಕ್ರಿಯೆ ನಿರಂತರವಾಗಿರಲಿದೆ.
2.ಪಳೆಯುಳಿಕೆ ತ್ಯಾಜ್ಯದ ಬಳಕೆಯಿಂದಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಬಹುದು.
3.ಯಾವುದೇ ತ್ಯಾಜ್ಯ ಉತ್ಪಾದನೆಯಾಗದ ಕಾರಣ ತಾಜ್ಯ ನಿರ್ವಹಣೆಯ ಹೊಣೆ ಇರುವುದಿಲ್ಲ.
4.ಸಮ್ಮಿಳನ ಪ್ರಕ್ರಿಯೆಯಿಂದ ಮಾಲಿನ್ಯ ಉಂಟಾಗದ ಕಾರಣ ಇದು ಪರಿಸರ ಸ್ನೇಹಿ.
5.ಭವಿಷ್ಯದಲ್ಲಿ ಇದು ಭೂಮಿಯ ಪ್ರಮುಖ ಇಂಧನ ಮೂಲವಾಗುವ ಸಾಧ್ಯತೆ.