newsics.com
ಬೆಂಗಳೂರು: ಚಳಿಗಾಲ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದ ಚಿಕ್ಕ ಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ಉಬ್ಬಸ ಸಮಸ್ಯೆ ಗಣನೀಯವಾಗಿ ಏರಿಕೆ ಹೆಚ್ಚುತ್ತಿದೆ.
ಮೂರರಿಂದ ಆರು ತಿಂಗಳೊಳಗಿನ ಮಕ್ಕಳಲ್ಲೂ ಶ್ವಾಸಕೋಶ ಸಂಬಂಧಿತ ಮತ್ತು ಬ್ರಾಂಕೈಟಿಸ್ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ. ಇದೊಂದು ಅಸಹಜ ಸಂದರ್ಭ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಹವಾಮಾನದಲ್ಲಿ ಏರುಪೇರು ಹೆಚ್ಚಾಗಿರುವುದರಿಂದ ಮಕ್ಕಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ವೈರಲ್ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ಉಬ್ಬಸ, ಅಸ್ತಮಾ, ಶ್ವಾಸಕೋಶ ಸಂಬಂಧಿತ ಮತ್ತು ಇತರೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಈ ರೀತಿಯ ಸಮಸ್ಯೆ ಹೆಚ್ಚಾಗಿ 3ರಿಂದ 6 ತಿಂಗಳ ವಯಸ್ಸಿನ ಶಿಶುಗಳಲ್ಲೂ ಕಂಡುಬರುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ಸಮಸ್ಯೆಯಿಂದ ದೂರವಿರಲು ಪೋಷಕರು ಆದಷ್ಟು ಮಕ್ಕಳನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗದಿರುವುದು ಒಳಿತು. ಮನೆಯಲ್ಲಿ ಮಕ್ಕಳಿರುವ ಪೋಷಕರು ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವ ಮೂಲಕ ಎಚ್ಚರಿಕೆವಹಿಸಬೇಕಾದ ಅನಿವಾರ್ಯತೆ ಇದೆ ಎಂಬುದು ಮಕ್ಕಳ ತಜ್ಞ ಡಾ. ಅಶೋಕ್ ಎಂ.ವಿ. ಅವರ ಅಭಿಪ್ರಾಯ.
ಚಿಕ್ಕ ಮಕ್ಕಳಲ್ಲಿ ಬ್ರಾಂಕೈಟಿಸ್ ಸಮಸ್ಯೆ ಕಂಡುಬರುವುದು ಸಾಮಾನ್ಯ. ಬಹುತೇಕ ಮಕ್ಕಳಲ್ಲಿ ವೈರಲ್ ಸೋಂಕಿನಿಂದ ಅಥವಾ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಹರಡುವ ಮೂಲಕ ಮತ್ತು ಈಗಾಗಲೆ ಈ ಸೋಂಕಿಗೆ ತುತ್ತಾದ ಮಕ್ಕಳಲ್ಲೂ ಈ ಸಮಸ್ಯೆ ಕಂಡುಬರುತ್ತದೆ. ಕುಟುಂಬದಲ್ಲಿ ಯಾರಾದರು ಅಸ್ತಮಾ ಹೊಂದಿದ್ದರೂ ಕೂಡ ಮಕ್ಕಳು ಬಹು ಬೇಗ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಧೂಳು ಮತ್ತು ವೈರಲ್ ಸೋಂಕುಗಳಿಂದಲೂ ಮಕ್ಕಳಲ್ಲಿ ಅಸ್ತಮಾ ಕಂಡುಬರಬಹುದು. ಹಾಗಾಗಿ ಪೋಷಕರು ನಿಗದಿತ ಸಮಯದಲ್ಲಿ ವ್ಯಾಕ್ಸಿನ್ ಹಾಕಿಸುವ ಮೂಲಕ ಮಕ್ಕಳ ಬಗ್ಗೆ ಹೆಚ್ಚು ಜಾಗೃತಿ ವಹಿಸಿ.
ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಎದುರಾದಾಗ ಮಕ್ಕಳಿಗೆ ನೆಬ್ಯುಲೈಸೇಶನ್ ಮತ್ತು ದೊಡ್ಡ ಮಕ್ಕಳಿಗೆ ಕೆಮ್ಮಿನ ಔಷಧ ನೀಡಲಾಗುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಹೈಪೋಕ್ಸಿಯಾಗೆ ಕಾರಣವಾಗಬಹುದು. ದೇಹದಲ್ಲಿ ಕಡಿಮೆ ಆಮ್ಲಜನಕದ ಪರಿಣಾಮ ನ್ಯುಮೋನಿಯಾಗೆ ತಿರುಗಬಹುದು. ದೇಹದಲ್ಲಿ ಆಮ್ಲಜನಕವು ಕಡಿಮೆಯಾದಂತೆ ಆರೋಗ್ಯವು ತೀರಾ ಹದಗೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳನ್ನು ಹೊರಗಿನ ವಾತಾವರಣಕ್ಕೆ ಒಡ್ಡುವುದನ್ನು ಆದಷ್ಟು ಮಿತಿಗೊಳಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಿ. ಒಂದು ವೇಳೆ ಮಗು ಅತಿಯಾದ ಜ್ವರ, ಶೀತ, ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.