newsics.com
ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ವೇಳೆಯಲ್ಲೇ ಬಾಣಂತಿಯರಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸದೊಂದು ಸಮಸ್ಯೆ ತೀವ್ರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಿನ ಬಾಣಂತಿಯರಲ್ಲಿ ಅತಿಯಾದ ರಕ್ತಸ್ರಾವ ಕಾಣಿಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಸೋಮವಾರ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆದಿದೆ. ಬಾಣಂತಿಗೆ ಹೆಚ್ಚು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಆದರೆ ಯಾಕೆ ರಕ್ತಸ್ರಾವ ಆಯಿತು ಎಂಬುದು ಮಾತ್ರ ತಿಳಿದಿಲ್ಲ.
ಆಸ್ಪತ್ರೆಗೆ ಬರುವ 10 ಬಾಣಂತಿಯರಲ್ಲಿ 4-5 ಜನರಲ್ಲಿ ಈ ಸಮಸ್ಯೆ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ, ಅತಿಯಾದ ರಕ್ತಸ್ರಾವ ಯಾಕೆ ಆಗುತ್ತಿದೆ ಎಂಬುದಕ್ಕೆ ಯಾರಿಗೂ ತಿಳಿಯುತ್ತಿಲ್ಲ. ವೈದ್ಯರಿಗೆ ಇದು ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.
ರಕ್ತಸ್ರಾವವಾಗುತ್ತಿರುವುದು ಹಲವು ಬಾಣಂತಿಯರಿಗೆ ಮೊದಲಿಗೆ ಅರಿವಿಗೇ ಬರುತ್ತಿಲ್ಲ ಎನ್ನಲಾಗಿದೆ. ಇದರಿಂದ ತುರ್ತು ಚಿಕಿತ್ಸೆ ನೀಡಿದರೂ ದೇಹದಲ್ಲಿ ರಕ್ತ , ಹಿಮೋಗ್ಲೋಬಿನ್ನ ಪ್ರಮಾಣ ಕಡಿಮೆಯಾಗುವ ಕಾರಣದಿಂದ ಅನೇಕರು ಪ್ರಾಣತೆರುವಂತಾಗಿದೆ. ಹೀಗಾಗಿ ರಕ್ತಸ್ರಾವ ಸಮಸ್ಯೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ತೀವ್ರ ರಕ್ತಸ್ರಾವ ಕುರಿತಂತೆ ಬಾಣಂತಿಯರು, ಅವರ ಕಡೆಯವರು ಕೂಡ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಅಲ್ಲದೆ, ಈ ರೀತಿಯ ಸಮಸ್ಯೆ ಎದುರಾದರೆ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯೆ ಡಾ. ಶರಧಿನಿ ಹೇಳಿದ್ದಾರೆ.