newsics.com
ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೊಟ್ಟೆ ಹೊಡೆದ ಬಳಿಕ ಶಾಸಕ ಮುನಿರತ್ನ ಅಲ್ಲಿಂದ ತೆರಳಿದ್ದು, ನಂತರ ಮುನಿರತ್ನ ಬೆಂಬಲಿಗರು ಹಾಗೂ ಕೈ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಹೌದು, ಘಟನೆ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಮತ್ತು ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿರತ್ನ ಅವರು ಕಾರ್ಯಕ್ರಮಕ್ಕೆ ಬಂದ ಕೂಡಲೇ ಅವರ ಕಾರಿನತ್ತ ಮೊಟ್ಟೆ ಎಸೆದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆಂದು ಶಾಸಕ ಮುನಿರತ್ನ ತೆರಳುತ್ತಿದ್ದ ವೇಳೆ ಅವರ ಕಾರಿನ ಮೇಲೆ ಕೆಲವರು ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ. ಇನ್ನು ಗಲಾಟೆ ವೇಳೆ ಸ್ಥಳದಲ್ಲಿದ್ದ 2-3 ಕಾರುಗಳು ಜಖಂಗೊಂಡಿವೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಗಲಾಟೆ ನಿಲ್ಲಿಸಿದ್ದಾರೆ. ಹಲವರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ ಆಸಿಡ್ ಮೊಟ್ಟೆಯಿಂದ ನನ್ನನ್ನು ಕೊಲ್ಲಲು ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.