newsics.com
ಬೆಳಗಾವಿ: ಪೊಲೀಸರು ವಶದಲ್ಲಿರುವ ಬಿಜೆಪಿ ಎಂಎಲ್ಸಿ ಸಿಟಿ ರವಿ, ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿರುವ ಅವರು, ಪೊಲೀಸರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು, ತಮಗೆ ಜೀವಕ್ಕೆ ಅಪಾಯವಿದ್ದು ಏನೇ ಆದರೂ ಅದಕ್ಕೆ ಪೊಲೀಸರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಹೆಬ್ಬಾಳ್ಕರ್ ಕಾರಣ ಎಂದು ವಿಡಿಯೋ ಸಂದೇಶ ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಮೂರು ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು, ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಉಲ್ಲೇಖಿಸಿದ್ದಾರೆ.